ಮಹಿಳೆಯನ್ನು ಬೆನ್ನಟ್ಟಿ ತುಳಿದು ಸಾಯಿಸಿದ ಕಾಡಾನೆ
Views: 57
ಕನ್ನಡ ಕರಾವಳಿ ಸುದ್ದಿ: ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮುಗುಲಿ ಗ್ರಾಮದಲ್ಲಿ ನಡೆದಿದೆ.
ಶೋಭಾ (40) ಮೃತಪಟ್ಟ ಮಹಿಳೆ.
ಮಂಗಳವಾರ ಬೆಳಗ್ಗೆ ಕಾಫಿ ತೋಟದಲ್ಲಿ ಕೆಲಸಕ್ಕೆ ಹೋಗಿದ್ದಾಗ ಕಾಡಾನೆ ದಾಳಿ ಮಾಡಿದೆ. ಶೋಭಾ ಅವರನ್ನು ಬೆನ್ನಟ್ಟಿ ತುಳಿದು ಸಾಯಿಸಿದೆ. ಸ್ಥಳಕ್ಕೆ ಡಿಎಫ್ಒ ಸೌರಭ್ ಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಆನೆಯು ಇತ್ತೀಚೆಗೆ ಕೊಡಗಿನಿಂದ ಹಾಸನದತ್ತ ಬಂದಿತ್ತು ಎನ್ನಲಾಗುತ್ತಿದೆ. ಮೃತ ಶೋಭಾ ಅವರು ಒಂದೂವರೆ ಎಕರೆ ಕಾಫಿ ತೋಟವನ್ನು ಹೊಂದಿದ್ದು, ಅವರ ತಾಯಿ ರಾಜಮ್ಮ ಕೂಡ ಜತೆಯಲ್ಲಿ ಹೋಗಿದ್ದರು. ಇಬ್ಬರೂ ನಡೆದುಕೊಂಡು ಹೋಗುತ್ತಿದ್ದ ವೇಳೆ ಆನೆ ದಾಳಿ ಮಾಡಿದೆ. ರಾಜಮ್ಮ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಆನೆಯು ಶೋಭಾ ಅವರನ್ನು ಕಾಲು ಕೆಳಗೆ ಹಾಕಿ ತುಳಿದಿದ್ದರಿಂದ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಇನ್ನು ಕಾಡಾನೆಗಳ ಹಾವಳಿ ಹೆಚ್ಚಳವಾಗಿರುವ ಹಿನ್ನೆಲೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.






