ಮನೆ ಮಂದಿ “ಪ್ರೇಮದ ಊರಲಿ” ಸಿನಿಮಾ ನೋಡಿ ಬರುವಾಗ ಚಿನ್ನ ಕದ್ದು ಎಸ್ಕೆಪ್ ಆಗಬೇಕಿದ್ದವ ಸಿಕ್ಕಿ ಬಿದ್ದ ಕಳ್ಳ!
Views: 14
ಕನ್ನಡ ಕರಾವಳಿ ಸುದ್ದಿ: ಮನೆ ಮಂದಿ ಎಲ್ಲರೂ ಪ್ರೇಮದ ಊರಲಿ ಸಿನಿಮಾ ನೋಡಲು ಹೋಗಿದ್ದಾಗ ಕಳ್ಳನೊಬ್ಬ ಮನೆಯೊಳಗೆ ನುಗ್ಗಿ ಕಳ್ಳತನ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾನೆ.
ಸಿನಿಮಾ ಎಂಜಾಯ್ ಮಾಡಿ ಮನೆಗೆ ವಾಪಸ್ ಆದ ಮನೆಮಂದಿಗೆ ಕಾದಿತ್ತು ಶಾಕ್… ಬೆಂಗಳೂರಿನಲ್ಲಿ ಈ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಕೇರಳ ಮೂಲದ ಅಜಯ್ ಎಂಬಾತ ಚಿನ್ನ ದೋಚಿ ಎಸ್ಕೆಪ್ ಆಗುವಷ್ಟರಲ್ಲಿ ಮನೆ ಮಾಲೀಕನ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ.
ಮನೆಯಲ್ಲಿ ಯಾರು ಇಲ್ಲದನ್ನು ಕಂಡ ಅಜಯ್, ಮಧ್ಯಾಹ್ನ ಮನೆಗೆ ನುಗ್ಗಿದ್ದು, ಮನೆಯಲ್ಲಿದ್ದ 120 ಗ್ರಾಂ ಚಿನ್ನವನ್ನು ಕದಿದ್ದಾನೆ. ಇತ್ತ ಕುಟುಂಬಸ್ಥರು ಮನೆಗೆ ವಾಪಸ್ ಆಗುತ್ತಿದ್ದಂತೆ ಸಿನಿಮಾಗೆ ಹೋಗುವಾಗ ಹೊರಗಡೆಯಿಂದ ಆಗಿದ್ದ ಲಾಕ್, ಇದೀಗ ಒಳಗಡೆಗೆ ಹೇಗೆ ಲಾಕ್ ಆಯಿತು ಎಂದು ಅನುಮಾನ ಮೂಡಿದ್ದು, ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಆರೋಪಿ ಮನೆ ಒಳಗಡೆ ನುಗ್ಗಿ, ಹೊರಗಡೆ ಬಾರದಿರುವುದು ತಿಳಿದು ಬಂದಿದೆ.
ತಕ್ಷಣ ಎಚ್ಚೆತ್ತುಕೊಂಡ ಕುಟುಂಬಸ್ಥರು, ಮನೆಯನ್ನು ಸುತ್ತುವರೆದು ಮನೆಯಲ್ಲಿದ್ದ ಕಳ್ಳನಿಗಾಗಿ ಶೋಧ ನಡೆಸಿದಾಗ ಮಂಚದ ಕೆಳಗಡೆ ಅವಿತಿರುವುದು ಗೊತ್ತಾಗಿ ಮನೆ ಮಂದಿ ಕಳ್ಳನನ್ನು ಸೆರೆಹಿಡಿದು ಥಳಿಸಿದ್ದಾರೆ.
ಮೂಲತಃ ಕೇರಳದ ತ್ರಿಶೂರ್‌ನ ಚಿತ್ತಿಲಪಲ್ಲಿ ಮೂಲದವನಾದ ಆರೋಪಿ ಕೆಲಸ ಅರಸಿ ಕೇರಳದಿಂದ ಬೆಂಗಳೂರಿಗೆ ಬಂದಿದ್ದು, ಯಲಹಂಕ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತರೊಂದಿಗೆ ವಾಸವಾಗಿದ್ದ. ಇನ್ನು ಈ ಅಜಯ್ ಕಳ್ಳತನಕ್ಕೂ ಮುನ್ನ ಎರಡು ಮೂರು ದಿನಗಳಿಂದ ಮನೆಯವರ ಚಲನವಲನದ ಮೇಲೆ ನಿಗಾ ಇಟ್ಟಿದ್ದ ಎಂಬುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಸದ್ಯ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದು ಮನೆ ಮಾಲೀಕರಿಗೆ ವಾಪಸ್ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.






