ಇನ್ಸೂರೆನ್ಸ್ ಹಣಕ್ಕಾಗಿ ಪತಿಯ ಕೊಲೆ: ಪತ್ನಿ ಸೇರಿ ಇಬ್ಬರು ಆರೋಪಿಗಳು ಸೆರೆ
Views: 11
ಕನ್ನಡ ಕರಾವಳಿ ಸುದ್ದಿ: ಮನೆ ನಿರ್ಮಾಣಕ್ಕೆ ಮಾಡಿದ್ದ ಸಾಲ ಮನ್ನಾ ಆಗುತ್ತದೆ ಹಾಗೂ ವಿಮೆ ಹಣ ಕೈ ಸೇರುತ್ತದೆ ಎಂಬ ತಪ್ಪು ಮಾಹಿತಿ ನಂಬಿ ಪತ್ನಿಯೇ ಪತಿಯನ್ನೇ ಕೊಲೆ ಮಾಡಿಸಿರುವ ಘಟನೆ ಕಾರಟಗಿ ತಾಲೂಕಿನ ಮುನ್ನೂರು ಕ್ಯಾಂಪ್‌ನಲ್ಲಿ ನಡೆದಿದೆ.
ಕಾರಟಗಿ ತಾಲೂಕಿನ ಮುಸ್ಪೂರು ಕ್ಯಾಂಪ್ ನಿವಾಸಿ ರಾಘವೇಂದ್ರ ಹನುಮಂತಪ್ಪ ಸಾಳುಂಕೆ (38) ಕೊಲೆಯಾದ ವ್ಯಕ್ತಿ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಉಮಾ, ಆಕೆಯ ಸಂಬಂಧಿ ಶಿವಾಜಿ ಹಾಗೂ ಶಿವಾಜಿಯ ಸ್ನೇಹಿತ ಖಲೀಲ್‌ನನ್ನು ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಘವೇಂದ್ರ ಮತ್ತು ಉಮಾ ದಂಪತಿ ಮನೆ ನಿರ್ಮಾಣಕ್ಕಾಗಿ ವಿವಿಧ ಸ್ತ್ರೀಶಕ್ತಿ ಸಂಘಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ಸುಮಾರು 18 ಲಕ್ಷ ರೂ.ಸಾಲ ಮಾಡಿಕೊಂಡಿದ್ದರು. ಸಾಲದ ಕಂತು ಪಾವತಿಸಲಾಗದೆ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ನಡುವೆ ಪತಿ ಮೃತಪಟ್ಟರೆ ವಿಮೆ ಹಣ ಸಿಗುತ್ತದೆ ಹಾಗೂ ಸಾಲ ಮನ್ನಾ ಆಗುತ್ತದೆ ಎಂಬ ತಪ್ಪು ಮಾಹಿತಿಯನ್ನು ಉಮಾ ನಂಬಿದ್ದಳು. ಇದೇ ಕಾರಣಕ್ಕೆ ಕೊಲೆ ಮಾಡಿಸಿದ್ದಳು ಎಂದು ತನಿಖೆ ವೇಳೆ ತಿಳಿದುಬಂದಿದೆ.
ಅನ್ನದಲ್ಲಿ ನಿದ್ದೆ ಮಾತ್ರೆ ಬೆರೆಸಿದ್ದ ಪತ್ನಿ: ಪತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಉಮಾ ಸುಮಾರು ಒಂದು ವಾರ ಅನ್ನದಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡಿದ್ದಳು ಎನ್ನಲಾಗಿದೆ. ಇದರಿಂದ ಉದ್ದೇಶ ಈಡೇರದೇ ಇರುವುದರಿಂದ ಗಂಗಾವತಿಯಲ್ಲಿದ್ದ ಸಂಬಂಧಿ ಶಿವಾಜಿಯನ್ನು ಸಂಪರ್ಕಿಸಿ, ಪತಿಯನ್ನು ಕೊಲೆ ಮಾಡಿದರೆ ಹೊಸ ಸ್ಕೂಟಿ ಕೊಡಿಸುವುದಾಗಿ ಆಮಿಷವೊಡ್ಡಿದ್ದಳು. ಬಳಿಕ ಶಿವಾಜಿ ತನ್ನ ಸ್ನೇಹಿತ ಖಲೀಲ್‌ನನ್ನು ಕೃತ್ಯಕ್ಕೆ ಸೇರಿಸಿಕೊಂಡಿದ್ದನು ಎನ್ನಲಾಗಿದೆ.






