ಉಡುಪಿ: SIR ನೆಪದಲ್ಲಿ ಒಂಟಿ ವೃದ್ಧೆ ಮನೆಗೆ ನುಗ್ಗಿ ಚಿನ್ನದ ಸರ ಕಳ್ಳತನ: ಇಬ್ಬರ ಬಂಧನ
Views: 0
ಕನ್ನಡ ಕರಾವಳಿ ಸುದ್ದಿ: ಒಂಟಿಯಾಗಿ ವಾಸಿಸುತ್ತಿದ್ದ 74 ವರ್ಷದ ವೃದ್ಧೆಯ ಮನೆಗೆ ನುಗ್ಗಿ ಚಿನ್ನದ ಸರ ಕಳ್ಳತನ ಮಾಡಿದ ಆರೋಪದ ಮೇಲೆ ಇಬ್ಬರನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 5.53 ಲಕ್ಷ ರೂ. ಮೌಲ್ಯದ ಚಿನ್ನದ ಸರ, ಸ್ಕೂಟರ್ ಹಾಗೂ ಎರಡು ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ಟೋಬರ್ 7ರಂದು ಸಂಜೆ ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ (SIR) ಕುರಿತು ಮಾಹಿತಿ ಕೇಳುವ ನೆಪದಲ್ಲಿ ಇಬ್ಬರು ಅಪರಿಚಿತರು ನಿಟ್ಟೂರಿನ ಶಾಂತಾ ಕಾರಂತ್ (74) ಅವರ ಮನೆಗೆ ಬಂದಿದ್ದರು. ಈ ವೇಳೆ ವೃದ್ಧೆಯನ್ನು ಕೆಳಕ್ಕೆ ದೂಡಿ, ಅವರ ಕುತ್ತಿಗೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಅಕ್ಟೋಬರ್ 10ರಂದು ಮಣಿಪಾಲದ ಮಣ್ಣಪಳ್ಳದಲ್ಲಿ ವಾದಿರಾಜ್ ಗಾಣಿಗ (44) ಮತ್ತು ಸಚಿನ್ (30) ಎಂಬವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕಳ್ಳತನ ಮಾಡಿದ ಚಿನ್ನದ ಸರವನ್ನು ಮಣಿಪಾಲದ ಇಂಡಸ್ಟ್ರಿಯಲ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಅಡವಿಟ್ಟಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಬಳಿಕ 34 ಗ್ರಾಂ ತೂಕದ ಚಿನ್ನದ ಸರ (4.50 ಲಕ್ಷ ರೂ. ಮೌಲ್ಯ), ಕೃತ್ಯಕ್ಕೆ ಬಳಸಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್ (90 ಸಾವಿರ ರೂ. ಮೌಲ್ಯ) ಹಾಗೂ ಎರಡು ಮೊಬೈಲ್ಗಳನ್ನು (13 ಸಾವಿರ ರೂ. ಮೌಲ್ಯ) ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಸಾಲ ತೀರಿಸುವ ಮತ್ತು ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೊದಲ ಆರೋಪಿ ವೃದ್ಧೆಯ ನೆರೆಮನೆಯವನಾಗಿದ್ದಾನೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.






