ಮದುವೆಗೆ ಒಪ್ಪದ ಪ್ರೇಯಸಿಯನ್ನು ಕತ್ತು ಕೊಯ್ದ ಪ್ರಿಯಕರ!
Views: 130
ಕನ್ನಡ ಕರಾವಳಿ ಸುದ್ದಿ : ಮದುವೆಗೆ ಒಪ್ಪದೆ ತಪ್ಪಿಸಿ ಕೊಳ್ಳುತ್ತಿದ್ದ ಕಾರಣಕ್ಕಾಗಿ ಪ್ರೇಯಸಿಯನ್ನು ಪ್ರೀಯಕರನೇ ಕತ್ತು ಕೊಯ್ದು ಕೊಂದಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಅಂಜಲಿ (23) ಕೊಲೆಯಾದ ಯುವತಿ. ರಾಜೀವ್ ಪ್ರೇಯಸಿಯನ್ನ ಕೊಂದ ಪ್ರಿಯಕರ.
ಅಂಜಲಿ ಮತ್ತು ರಾಜೀವ್ ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದು, ಹಿಂದೆ ಕೆಲಸ ಮಾಡುತ್ತಿದ್ದ ಜಾಗದಲ್ಲಿ ಪರಿಚಯವಾಗಿ, ಬಳಿಕ ಸ್ನೇಹ ಪ್ರೇಮವಾಗಿ ಬದಲಾಗಿತ್ತು. ಈ ವಿಚಾರ ಎರಡೂ ಮನೆಯವರಿಗೆ ತಿಳಿದಿತ್ತು. ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ, ಅಂಜಲಿ ಕುಟುಂಬಸ್ಥರು ಮದುವೆಗೆ ಒಪ್ಪಿರಲಿಲ್ಲ.
ಹಲವು ಬಾರಿ ಮದುವೆಗೆ ಒಪ್ಪಿಸಲು ಆಗದೇ ರಾಜೀವ್ ರೋಸಿಹೋಗಿದ್ದ. ಇತ್ತೀಚೆಗೆ ಅಂಜಲಿ ಕೂಡ ಪೋಷಕರ ಒತ್ತಾಯಕ್ಕೆ ಮಣಿದಿದ್ದಳು, ಜೊತೆಗೆ ರಾಜೀವ್‌ನನ್ನು ವಿರೋಧ ಮಾಡಲು ಶುರು ಮಾಡಿದ್ದಳು.
ಭಾನುವಾರ ಸಂಜೆ ರಾಜೀವ್, ಪ್ರೇಯಸಿ ಅಂಜಲಿಯನ್ನು ಊಟಕ್ಕೆ ಕರೆದುಕೊಂಡು ಬಂದಿದ್ದ. ಈ ವೇಳೆ ಮತ್ತೆ ಮದುವೆ ಪ್ರಸ್ತಾಪ ಮಾಡಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮತ್ತೆ ಗಲಾಟೆ ಶುರುವಾಗಿದೆ. ಕೊನೆಗೆ ಕೋಪಗೊಂಡ ರಾಜೀವ್, ಪೈಪ್ ಲೈನ್ ರಸ್ತೆಗೆ ಕರೆದುಕೊಂಡು ಬಂದು ಅಂಜಲಿಯ ಕತ್ತುಕೊಯ್ದು ಕೊಲೆ ಮಾಡಿದ್ದಾನೆ.
ನೆರವಿಗೆ ಧಾವಿಸಿದ ಸ್ಥಳೀಯರು ತಕ್ಷಣ ಅಂಜಲಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅಂಜಲಿ ಸಾವನ್ನಪ್ಪಿದ್ದಾಳೆ. ಅಂಜಲಿ ಮೃತ ದೇಹದವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.






