ಇತರೆ

ಬ್ರಹ್ಮಾವರ: ಕೋಡಿ ಕನ್ಯಾಣ ತೀರದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಬೆಂಗಳೂರಿನ ಯುವಕ ಸಮುದ್ರ ಪಾಲು 

Views: 63

ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾಣ ಸಮುದ್ರ ತೀರದಲ್ಲಿ ಇಂದು ಶುಕ್ರವಾರ ಬೆಳಿಗ್ಗೆ ಸಮುದ್ರದಲ್ಲಿ ಈಜಲು ಹೋಗಿದ್ದ ಬೆಂಗಳೂರು ಮೂಲದ ಯುವಕನೋರ್ವ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

ಬೆಂಗಳೂರಿನ ರಾಜಾಜಿನಗರ ನಿವಾಸಿ ನಿಖಿಲ್ ಕುಮಾರ್ (32) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ ಕರಾವಳಿ ಭಾಗಕ್ಕೆ ಪ್ರವಾಸ ಕೈಗೊಂಡಿದ್ದ 9 ಮಂದಿ ಯುವಕರ ತಂಡವೊಂದು ಇಂದು ಮುಂಜಾನೆ ಕೋಡಿ ಕನ್ಯಾಣ ಸಮುದ್ರ ತೀರಕ್ಕೆ ಭೇಟಿ ನೀಡಿತ್ತು. ಕಡಲತೀರದ ಸೌಂದರ್ಯ ಸವಿಯುತ್ತಿದ್ದ ತಂಡದ ಪೈಕಿ ನಾಲ್ವರು ಯುವಕರು ಸಮುದ್ರದಲ್ಲಿ ಸ್ನಾನ ಮಾಡಲೆಂದು ನೀರಿಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಅಲೆಗಳ ತೀವ್ರತೆ ಹೆಚ್ಚಾಗಿದ್ದು, ನಿಖಿಲ್ ಅವರು ಭಾರಿ ನೀರಿನ ಸೆಳೆತಕ್ಕೆ ಸಿಲುಕಿ ಸಮುದ್ರದ ಒಳಕ್ಕೆ ಕೊಚ್ಚಿ ಹೋಗಿದ್ದಾರೆ.

ಯುವಕ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಮತ್ತು ಸಾರ್ವಜನಿಕರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಸಮಯಪ್ರಜ್ಞೆ ಮೆರೆದ ಅವರು ದೋಣಿಯ ಮೂಲಕ ಸಮುದ್ರದೊಳಗೆ ತೆರಳಿ, ಯುವಕನನ್ನು ರಕ್ಷಿಸಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಅಷ್ಟರಲ್ಲಾಗಲೇ ತೀವ್ರ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಿಖಿಲ್‌ನನ್ನು ಜೀವನ್ ಮಿತ್ರ ಆಂಬುಲೆನ್ಸ್‌ನ ನಾಗರಾಜ್ ಪುತ್ರನ್ ಹಾಗೂ ಕಿಶೋ‌ರ್ ಶೆಟ್ಟಿ ಅವರು ಸ್ಥಳೀಯರ ಸಹಕಾರದೊಂದಿಗೆ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಯುವಕನನ್ನು ಪರೀಕ್ಷಿಸಿದ ವೈದ್ಯರು ಆತ ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಪ್ರಕರಣ ದಾಖಲು:ಘಟನಾ ಸ್ಥಳಕ್ಕೆ ಕೋಟ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!