ಜನಮನ

ಬೆಂಗಳೂರು ಹುಸಿ ಬಾಂಬ್ ಬೆದರಿಕೆ,ಮುಜಾಹಿದೀನ್ ಹೆಸರಲ್ಲಿ ಉಗ್ರರ ಕೃತ್ಯದ ಶಂಕೆ?ಹಲವು ಶಾಲೆಗಳಿಗೆ ರಜೆ,ನಿರ್ದಾಕ್ಷಿಣ್ಯ ಕ್ರಮ: ಗೃಹಸಚಿವರು 

Views: 0

ಬೆಂಗಳೂರು,ಸಿಲಿಕಾನ್ ಸಿಟಿಯ 60ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಇಂದು ಬೆಳ್ಳಂಬೆಳಿಗ್ಗೆ ಬಾಂಬ್ ಬೆದರಿಕೆ ಕರೆ ಬಂದಿರುವುದು ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರಲ್ಲಿ ನಡುಕ ಹುಟ್ಟಿಸಿದೆ. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಗಾಬರಿಗೊಂಡ ಪೋಷಕರು ಶಾಲೆಯತ್ತ ದೌಡಾಯಿಸಿ ತಮ್ಮ ಮಕ್ಕಳನ್ನು ಧಾವಂತದಲ್ಲಿ ಮನೆಯತ್ತ ಕರೆದೊಯ್ದರು. ಮೇಲ್ನೋಟಕ್ಕೆ ಈ ಬಾಂಬ್ ಬೆದರಿಕೆಯ ಹಿಂದೆ ಉಗ್ರಗಾಮಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ನಿಖರ ಮಾಹಿತಿ ತಿಳಿಯಲಿದೆ.

ಮುಜಾಹಿದ್ದಿನ್ ಹೆಸರಿನಲ್ಲಿ ಬಂದಿರುವ ಇ-ಮೇಲ್ ಬಾಂಬ್ ಬೆದರಿಕೆ ಕರೆ ಮಾಡಿ ಕೆಲವು ಅಂತರರಾಷ್ಟ್ರೀಯ ವಿಚಾರ ಪ್ರಸ್ತಾವಿಸಿರುವುದರಿಂದ ಉಗ್ರಗಾಮಿಗಳ ಕೃತ್ಯ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆಯೂ ಬೆಂಗಳೂರಿನ ಶಾಲೆಗಳಿಗೆ ಈ ರೀತಿಯ ಬಾಂಬ್ ಬೆದರಿಕೆ ಕರೆ ಬಂದಿತ್ತು, ಇದೀಗ ಮತ್ತೆ ಈ ಬಾಂಬ್ ಬೆದರಿಕೆ ಕರೆ ಪುನರಾವರ್ತನೆಯಾಗಿರುವುದು ಬೆಂಗಳೂರಿನ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.ಬಸವೇಶ್ವರ ನಗರ, ಯಲಹಂಕ, ಸದಾಶಿವನಗರ ಸೇರಿದಂತೆ ವಿವಿಧ ಪ್ರದೇಶದ 60 ಕ್ಕೂ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಸಂದೇಶವು ಬೆಳಿಗ್ಗೆ 9 ರ ಸುಮಾರಿಗೆ ಬಂದಿದ್ದು ಈ ಸುದ್ದಿಯು ಕೆಲವೇ ನಿಮಿಷಗಳಲ್ಲಿ ಎಲ್ಲೆಡೆ ಹರಡಿ ಶಾಲೆಗಳತ್ತ ಪೋಷಕರು ದೌಡಾಯಿಸಿದರು.

ಬಾಂಬ್ ಬೆದರಿಕೆ ಇಮೇಲ್ ಸಂದೇಶ ಬಾರದಿದ್ದ ಶಾಲೆಗಳ ಬಳಿಯೂ ಪೋಷಕರು ಜಮಾಯಿಸಿ ಮಕ್ಕಳನ್ನು ಕಳುಹಿಸುವಂತೆ ಪಟ್ಟು ಹಿಡಿದಿದ್ದರಿಂದ ಶಿಕ್ಷಕರು ಅನಿವಾರ್ಯವಾಗಿ ಮನೆಗೆ ಕಳುಹಿಸಿಕೊಟ್ಟರು.ಬಸವೇಶ್ವರ ನಗರದ ನ್ಯಾಷನಲ್, ವಿದ್ಯಾಶಿಲ್ಪ,ಸದಾಶಿವನಗರದ ಪೂರ್ಣ ಪ್ರಜ್ಞ ,ಯಲಹಂಕದ ಶಾಲೆಗಳು ಸೇರಿದಂತೆ 60 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದಾರೆ.

ಬಸವೇಶ್ವರ ನಗರ, ಯಲಹಂಕ, ಸದಾಶಿವ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಕೂಡಲೇ ಶಾಲೆಗೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ದೌಡಾಯಿಸಿ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಓಡೋಡಿ ಬಂದ ಪೋಷಕರು:

ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮಕ್ಕಳನ್ನು ಶಾಲೆಯಿಂದ ಮನೆಗೆ ವಾಪಸ್ ಕಳುಹಿಸಿದ್ದಾರೆ. ಆತಂಕಗೊಂಡ ಪೋಷಕರು ಶಾಲೆಯ ಬಳಿ ಓಡಿ ಬಂದು ಮಕ್ಕಳನ್ನು ಕರೆದೊಯ್ದಿದ್ದಾರೆ.ಇ-ಮೇಲ್ ನಲ್ಲಿ ಬೆದರಿಕೆ ಬಂದ ತಕ್ಷಣವೇ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳದ ಸಿಬ್ಬಂದ ಶಾಲೆಗಳ ಬಳಿ ಪರಿಶೀಲನೆ ನಡೆಸಿದ್ದಾರೆ.

ನಗರ ಪೊಲೀಸ್ ಆಯುಕ್ತ ದಯಾನಂದ್ ಬಾಂಬ್ ಬೆದರಿಕೆ ಇ-ಮೇಲ್ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಮ್ಮ ಪೊಲೀಸ್ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದರು.

ಮಕ್ಕಳು, ಪೋಷಕರು ಭಯ, ಆತಂಕ ಪಡುವ ಅಗತ್ಯವಿಲ್ಲ. ನಮ್ಮ ಸಿಬ್ಬಂದಿ ಪರಿಶೀಲನೆ ಮುಂದುವರೆಸಿದ್ದಾರೆ. ಇದು ಹುಸಿ ಬಾಂಬ್ ಕರೆ ಎಂಬುದು ಕೆಲವೇ ಕ್ಷಣಗಳಲ್ಲಿ ತಿಳಿಯಲಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು. ಕಳೆದ ವರ್ಷ ಇದೇ ದಿನ ನಗರದ 30 ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿತ್ತು. ಆಗ ಪೊಲೀಸರು, ಬಾಂಬ್ ಪತ್ತೆ ದಳ, ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿತ್ತು.

ಕಳೆದ ವರ್ಷ ಬೆದರಿಕೆ:

ಕಳೆದ ವರ್ಷ ಮಹದೇವಪುರದ ಗೋಪಾಲನ್ ಇಂಟನ್ರ್ಯಾಷನಲ್ ಶಾಲೆ, ವರ್ತೂರು ಠಾಣಾ ವ್ಯಾಪ್ತಿಯ ಡೆಲ್ಲಿ ಪಬ್ಲಿಕ್ ಸ್ಕೂಲ್, ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯ ನ್ಯೂ ಅಕಾಡೆಮಿ ಸ್ಕೂಲ್, ಹೆಣ್ಣೂರು ಠಾಣಾ ವ್ಯಾಪ್ತಿಯ ಸೇಂಟ್ ವಿನ್ಸೆಂಟ್ ಪೌಲ್ ಶಾಲೆ, ಗೋವಿಂದಪುರ ಠಾಣಾ ವ್ಯಾಪ್ತಿಯ ಇಂಡಿಯನ್ ಪಬ್ಲಿಕ್ ಸ್ಕೂಲ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ದುಷ್ಕರ್ಮಿಗಳು ಬೆದರಿಸಿದ್ದರು.

ನಿರ್ದಾಕ್ಷಿಣ್ಯ ಕ್ರಮ:

ಹಲವು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಮಾಡಿರುವ ಕೃತ್ಯದ ಹಿಂದೆ ಯಾರೇ ತಪ್ಪು ಮಾಡಿದರೂ ಸರಿಯಾದ ತನಿಖೆ ಮಾಡಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಖಾಸಗಿ ಶಾಲೆಗಳಿಗೆ ಬೆದರಿಕೆ ಕರೆ ಬಂದಿರುವ ಘಟನೆ ಬಗ್ಗೆ ತನಿಖೆ ಮಾಡಿಸುತ್ತೇವೆ, ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ, ಅವರು ಆತಂಕದಲ್ಲಿ ಶಾಲೆಗೆ ಹೋಗುವಂತಾಗಬಾರದು, ಇಂತಹ ಸಮಾಜಘಾತುಕ ಕುಕೃತ್ಯದಲ್ಲಿ ತೊಡಗಿರುವವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ, ಈ ವಿಷಯದಲ್ಲಿ ರಾಜಿ ಮಾಡುವುದಿಲ್ಲ. ನಾವು ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದರು.

ಬಾಲಕನ ಆಕ್ರೋಶ

ಬಾಂಬ್ ಬೆದರಿಕೆ ಕರೆ ಬಂದಿದ್ದರಿಂದ ಅಪ್ಪ-ಅಮ್ಮನಿಗೆ ಮತ್ತು ಸ್ಹೇಹಿತರಿಗೆ ಕಷ್ಟವಾಗಿದೆ. ಈ ರೀತಿ ಬೆದರಿಕೆ ಪತ್ರ ಕಳುಹಿಸಿರುವವರ ವಿರುದ್ಧ ಪೊಲೀಸರಿಗೆ ದೂರು ಕೊಟ್ಟೆಕೊಡುತ್ತೇನೆ ಎಂದು ಬಾಂಬ್ ಬೆದರಿಕೆಗೆ ಒಳಗಾಗಿದ್ದ ಶಾಲೆಯ ಪುಟ್ಟ ಬಾಲಕನ ಆಕ್ರೋಶದ ನುಡಿಗಳಿವು.

ಈ ವೇಳೆ ಪುಟ್ಟ ಬಾಲಕ ಪ್ರತಿಕ್ರಿಯೆ ನೀಡಿ ನಮ್ಮ ಅಪ್ಪ-ಅಮ್ಮ ಕೆಲಸಕ್ಕೆ ಹೋಗಿದ್ದಾರೆ.ಹೇಗೋ ಕಷ್ಟಪಟ್ಟು ಶಾಲೆಗೆ ಕರೆದುಕೊಂಡು ಬಿಡುತ್ತಾರೆ. ಮತ್ತೆ ಪುನಃ ಶಾಲೆಗೆ ಬಂದು ನನ್ನನ್ನು ಕರೆದುಕೊಂಡು ಹೋಗಬೇಕು. ಈ ರೀತಿಯಾದರೆ ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡನು.

ಬಹುತೇಕ ಶಾಲೆಗಳಿಗೆ ರಜೆ

60ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಪೋಷಕರು ಕಕ್ಕಾಬಿಕ್ಕಿಯಾಗಿದ್ದಾರೆ. ಬಾಂಬ್ ಕರೆ ಬಾರದ ಶಾಲೆಗಳಿಗೂ ತೆರಳಿ ತಮ್ಮ ಮಕ್ಕಳನ್ನು ಕಳುಹಿಸಿಕೊಡುವಂತೆ ಪಟ್ಟು ಹಿಡಿದಿದ್ದಾರೆ. ಈ ವೇಳೆ ಶಾಲಾ ಆಡಳಿತ ಮಂಡಳಿ ಜತೆಗೂ ವಾಗ್ವಾದ ನಡೆದ ಪ್ರಸಂಗವೂ ನಡೆಯಿತು.

ಪೋಷಕರು ಬಿಗಿಪಟ್ಟು ಹಿಡಿದಿದ್ದರಿಂದ ಅನಿವಾರ್ಯವಾಗಿ ಶಾಲೆಯಿಂದ ಮಕ್ಕಳನ್ನು ಪೋಷಕರು ಕಳುಹಿಸಿಕೊಟ್ಟರು.

ಮುಜಾಹಿದೀನ್ ಹೆಸರಲ್ಲಿ ಬೆದರಿಕೆ:ಉಗ್ರರ ಕೃತ್ಯದ ಶಂಕೆ?

ನಗರದ ಖಾಸಗಿ ಶಾಲೆಗಳಿಗೆ ಏಕಕಾಲದಲ್ಲಿ ಬಂದಿರುವ ಬೆದರಿಕೆ ಪತ್ರವು ಉಗ್ರವಾದಿಗಳಿಂದಲೇ ಬಂದಿರುವ ಬಲವಾದ ಅನುಮಾನ ವ್ಯಕ್ತವಾಗಿದೆ.

ಬೆದರಿಕೆ ಪತ್ರದ ಸಾರಾಂಶ

1.ಶಾಲೆಯ ಮೈದಾನದಲ್ಲಿ ಸ್ಫೋಟಕ ಸಾಧನಗಳನ್ನು ಇಟ್ಟಿದ್ದೇವೆ.

2.ನವೆಂಬರ್ 26ರಂದು ಅಲ್ಲಾಹುವಿನ ದಾರಿಯಲ್ಲಿರುವ ಹುತಾತ್ಮರು ನೂರಾರು ಮೂರ್ತಿ ಪೂಜಕರನ್ನು ಕೊಂದು ಹಾಕಿದ್ದಾರೆ. ಲಕ್ಷಾಂತರ ಕಾಫಿರರನ್ನು ಕೇವಲ ಒಂದು ಚೂರಿಯನ್ನು ಹಿಡಿದು ಎದುರಿಸುವುದಕ್ಕೆ ನಿಜವಾಗಿಯೂ ತುಂಬ ಧೈರ್ಯವಿರಬೇಕು.

3.ನಾವು ಸಾಯುತ್ತೇವೆ ಎಂಬುದು ತಿಳಿದಿದ್ದರೂ ನೂರಾರು ಮುಜಾಹಿದೀನ್‌ಗಳು ಯುದ್ಧ ಭೂಮಿಗೆ ಪ್ರವಾಹದಂತೆ ನುಗ್ಗಿದರು.

4.ನೀವು ಅಲ್ಲಾಹುವಿನ ವೈರಿಗಳು. ನಾವು ನಿಮ್ಮನ್ನು ನಿಮ್ಮ ಮಕ್ಕಳನ್ನು ಕೊಂದು ಹಾಕಲಿದ್ದೇವೆ.

5.ನಿಮಗೆ ಎರಡು ಆಯ್ಕೆಗಳಿವೆ. ಒಂದೋ ನಮ್ಮ ಗುಲಾಮರಾಗುವುದು, ಇಲ್ಲವೇ ಅಲ್ಹಾಹುವಿನ ಧರ್ಮವನ್ನು ಸ್ವೀಕರಿಸುವುದು.

6.ನಿಮ್ಮ ದೇವಸ್ಥಾನಗಳು, ನಿಮ್ಮ ಮೂರ್ತಿಗಳು, ಬುದ್ಧನಿಂದ ಅನಂತತ್ವದವರೆಗಿನ ನಿಮ್ಮ ನಂಬಿಕೆಗಳೆಲ್ಲವೂ ನಮ್ಮ ಸ್ಫೋಟದಲ್ಲಿ ಬೂದಿಯಾಗಿ ಹಾರಿ ಹೋಗಲಿವೆ.

7.ಬಿಸ್ಮಿಲ್ಲಾ ಅಲ್ಲಾಹುವಿನ ನಿಜವಾದ ಧರ್ಮವನ್ನು ಭಾರತ ಎಲ್ಲೆಡೆ ಪಸರಿಸಲಿದ್ದಾನೆ. ನಾವು ನಿಮ್ಮ ಬಳಿಗೆ ದಾಳಿಕೋರರನ್ನು ಕಳುಹಿಸಿದ್ದೇವೆ. ನಿಮ್ಮನ್ನು ಮುಳುಗಿಸಲು ಅವರೆಲ್ಲರೂ ಈಗ ಹಾರಿ ಹಾರಿ ಬರುತ್ತಿದ್ದಾರೆ.

8.ನಾಳೆ ಇಡೀ ಜಗತ್ತು ಬಿಸ್ಮಿಲ್ಲಾಹನ ಕ್ಯಾಪಿಟೋಲ್ (ಧರ್ಮ ಕೇಂದ್ರ) ಆಗಲಿದೆ. ಜಗತ್ತಿನಾದ್ಯಂತ ಸಾವಿರಾರು ಯಹೂದಿಗಳು ಸಾಯಲಿದ್ದಾರೆ.

9.ಹೀಗಾಗಿ ಒಂದೋ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಿ ಅಥವಾ ಇಸ್ಲಾಮಿನ ಕತ್ತಿಗಳ ಹೊಡೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳಿ

10.ಇಸ್ಲಾಂನ್ನು ನಂಬದೆ ಇರುವ ವ್ಯಕ್ತಿಗಳು ನಿಮಗೆ ಎದುರಾದರೆ ನೀವು ಅವರ ತಲೆಯನ್ನು ಕತ್ತರಿಸಿ ಹಾಕಿ. ಅವರ ಎಲ್ಲ ಬೆರಳುಗಳನ್ನು ಕತ್ತರಿಸಿ ಹಾಕಿ. ಅವರು ನಿಮ್ಮನ್ನು ಹೇಗೆ ಹೊಡೆದುರುಳಿಸಲು ಪ್ರಯತ್ನಿಸುತ್ತಿದ್ದಾರೋ ನೀವೂ ಹಾಗೆಯೇ ಬಹು ನಂಬಿಕೆಗಳನ್ನು ಹೊಂದಿರುವ ಶ್ರದ್ಧಾಳುಗಳು ಯಾರಿರುತ್ತಾರೋ ಅವರ ವಿರುದ್ಧ ಹೋರಾಡಿ.

ಎಲ್ಲ ಶಾಲೆಗಳಿಗೂ ಒಂದೇ ರೀತಿಯ ಪತ್ರ ಕಳುಹಿಸಲಾಗಿದೆ.

ಇದರಲ್ಲಿ ಭಾರತ ಮತ್ತು ಪ್ಯಾಲೆಸ್ತೀನ್ ವಿಚಾರದಲ್ಲಿ ಪ್ರಮುಖವಾಗಿ ವಿಷಯ ಪ್ರಸ್ತಾವನೆ ಮಾಡಲಾಗಿದೆ. ನವೆಂಬರ್ 26ರ ಹತ್ಯಾಕಾಂಡವನ್ನು ನೆನಪಿಸಲಾಗಿದೆ. ಆದರೆ, ಇದರ ವಿವರ ನೀಡಲಾಗಿಲ್ಲ. ನವೆಂಬರ್ 26ರಂದು ಹಿಂದೆ ಮುಂಬಯಿ ದಾಳಿ ನಡೆದಿತ್ತು.

ಇದು ವ್ಯವಸ್ಥಿತವಾಗಿ ಬರೆದ ಪತ್ರವಾಗಿದ್ದು, ಎಲ್ಲ ಶಾಲೆಗಳ ಈ ಮೇಲ್‌ಗಳನ್ನು ಸಂಗ್ರಹಿಸಿ ಕಳುಹಿಸಲಾಗಿದೆ. ಶಾಲೆಗಳ ಮೈದಾನದಲ್ಲಿ ಬಾಂಬ್ ಇಡಲಾಗಿದೆ ಎನ್ನುವುದು ಅವರು ಹೇಳಿರುವ ಮಾಹಿತಿಯಾಗಿದ್ದು, ಎಲ್ಲೂ ಬಾಂಬ್‌ಗಳು ಪತ್ತೆಯಾಗಿಲ್ಲ.

ನಾಳೆ ಬೆಂಗಳೂರು ಶಾಲಾ ಕಾಲೇಜುಗಳಿಗೆ ರಜೆ ಇಲ್ಲ: ಬಾಂಬ್ ಬೆದರಿಕೆ  ಇಂದು ಶಾಲೆಗಳಿಗೆ ರಜೆ ನೀಡಲಾಗಿತ್ತು. ಆದರೆ ನಾಳೆ ಎಂದಿನಂತೆ ಬೆಂಗಳೂರಿನ ಶಾಲಾ-ಕಾಲೇಜು ನಡೆಯುತ್ತೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ. ದಯಾನಂದ್ ಹೇಳಿದ್ದಾರೆ. ನಗರದಲ್ಲಿ  ಮಾತನಾಡಿದ ಅವರು, ಯಾವುದೇ ಗಂಭೀರತೆ ಇಲ್ಲ, ಹೀಗಾಗಿ ನಾಳೆ ಶಾಲೆಗಳಿಗೆ ರಜೆ ಇಲ್ಲ ಎಂದು ಹೇಳಿದ್ದಾರೆ.

 

Related Articles

Back to top button
error: Content is protected !!