ಇತರೆ

ಬಾರ್ಕೂರು ದೇವಳ: ಬ್ರಹ್ಮಕಲಶೋತ್ಸವ ಹಾಗೂ ಅಭಿವೃದ್ಧಿ ಕಾರ್ಯಗಳ ಮನವಿ ಪತ್ರ ಬಿಡುಗಡೆ

Views: 376

ಬ್ರಹ್ಮಾವರ :ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಲ್ಲಿನ ಬ್ರಹ್ಮಕಲಶೋತ್ಸವ ಹಾಗೂ ಅಭಿವೃದ್ಧಿ ಕಾರ್ಯಗಳ ಮನವಿ ಪತ್ರವನ್ನು ಅಗಸ್ಟ್ 11 ರಂದು ರವಿವಾರ ಬಿಡುಗಡೆಗೊಳಿಸಲಾಯಿತು.

ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಾರ್ಕೂರು ರಂಗನಕೆರೆ ಶ್ರೀ ಶ್ರೀನಿವಾಸ ಶೆಟ್ಟಿಗಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಎಲ್ಲರ ಸಮ್ಮುಖದಲ್ಲಿ ಮನವಿ ಪತ್ರವನ್ನು ಬಿಡುಗಡೆಗೊಳಿಸುತ್ತಿದ್ದೇವೆ ತನು- ಮನದ ಧನಸಹಕಾರ ನೀಡಿ ಮುಂದಿನ ಕಾರ್ಯಕ್ರಮ ಯಶಸ್ವಿಯಾಗುವಂತೆ ಸಹಕರಿಸಿ ಎಂದರು.

ದೇವಳದ ಆಡಳಿತ ಮೊಕ್ತೇಸರರಾದ ಡಾ.ಸಿ ಜಯರಾಮ್ ಶೆಟ್ಟಿಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಲಕ್ಷ್ಮಣ ಕೊಡಿಯಾಲ್ ಬೈಲ್ ಮಾತನಾಡಿ, ಮೂಲ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿ ಕಾರ್ಯಕ್ರಮದ ಚಾಲನೆಗೆ ನಮಗೆಲ್ಲರಿಗೂ ಸೌಭಾಗ್ಯತಂದಿದೆ ನಾವೆಲ್ಲರೂ ಒಟ್ಟಿಗೆ ಸೇರಿ ಈ ಕಾರ್ಯಕ್ರಮದ ಯಶಸ್ಸಿಗೆ ಪಣತೊಡೋಣ ಎಂದರು.

ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರರಾದ ಸುರೇಶ್ ಶೆಟ್ಟಿಗಾರ್ ಅವರು ಬ್ರಹ್ಮಕಲಶೋತ್ಸವ ಹಾಗೂ ಅಭಿವೃದ್ಧಿ ಕಾರ್ಯಗಳ ಮನವಿ ಪತ್ರವನ್ನು ಬಿಡುಗಡೆಗೊಳಿಸಿ ಭಕ್ತರಿಗೆ ಹಸ್ತಾಂತರಿಸಿದರು.

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಹೆಚ್.ಎ. ಗೋಪಾಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ದೇವಳದ ಮಾಜಿ ಮೊಕ್ತೇಸರರಾದ ಪುರುಷೋತ್ತಮ್ ಶೆಟ್ಟಿಗಾರ್, ದೇವಳದ ಸಹ ಮೊಕ್ತೇಸರರು, ಆಡಳಿತ ಮಂಡಳಿಯ ಸದಸ್ಯರು ಮಾಗಣೆಯ ಗುರಿಕಾರರು ಮತ್ತು ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ದೇವಳದ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿಗಾರ್ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಡಾ. ಶಿವಪ್ರಸಾದ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ವಕ್ವಾಡಿ ವಂದಿಸಿದರು.

ಮನವಿ

ಭಕ್ತ ಬಂಧುಗಳೇ,

ಕರಾವಳಿ ಕರ್ನಾಟಕದ ಪದ್ಮಶಾಲಿಗರ ಮೂಲ ಕ್ಷೇತ್ರವಾದ ಬಾರಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಅತೀ ಪುರಾತನವೂ, ಕಾರಣಿಕವೂ ಆಗಿದೆ. 2005ನೇ ಇಸವಿಯಲ್ಲಿ ಜೀರ್ಣೋದ್ಧಾರಗೊಂಡ ನಂತರ ಕೆಲವು ಅಭಿವೃದ್ಧಿ ಕಾರ್ಯಗಳೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸನ್ನದ್ಧವಾಗಿದೆ. ಶ್ರೀ ಕ್ಷೇತ್ರವು ಪದ್ಮಶಾಲಿ ಸಮುದಾಯದ 16 ಶ್ರೀ ವೀರಭದ್ರ ದೇವಸ್ಥಾನಗಳಲ್ಲಿ ವೀರಗಲ್ಲು ಮತ್ತು ಶಿಲಾಶಾಸನವಿರುವ ಏಕೈಕ ದೇವಸ್ಥಾನವಾಗಿದ್ದು, ಜೀರ್ಣೋದ್ಧಾರದ ಉತ್ಕನನದಲ್ಲಿ ದೊರೆತ ಷಡಾಧಾರದ ಅವಶೇಷಗಳು ಕರ್ನಾಟಕದಲ್ಲೇ ಅತೀ ಪ್ರಾಚೀನವಾಗಿದ್ದು, ಅದು ಆಗಮ ಶಾಸ್ತ್ರಕ್ಕೆ ದೃಢವಾದ ಆಧಾರ ಒದಗಿಸಿದೆ ಮಾತ್ರವಲ್ಲದೆ ಈ ಕ್ಷೇತ್ರದ ಶಾಸ್ತ್ರೋಕ್ತತೆ,ಪ್ರಾಚೀನತೆಗೆ ಮತ್ತು ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ.

ನಮ್ಮ ಮೌಖಿಕ ಪರಂಪರೆಯಲ್ಲಿ ಮತ್ತು ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದ ವಿಚಾರಗಳು ಒಂದಕ್ಕೊಂದು ಪೂರಕವಾಗಿವೆ. ಅದರಂತೆ ನಮ್ಮ ಪೂರ್ವಿಕರ ಮೂಲ ಅಮರಾವತಿಯಾಗಿದ್ದು ಅಲ್ಲಿಂದ ಕಂಚಿಗೆ ವಲಸೆ ಬಂದರು. ಕಾಳಿ ದೇವಿಯ ಆರಾಧನೆ ಮತ್ತು ‘ಶೆಟ್ಟಿಗಾರ್’ ನಾಮಧೇಯ ಪರಂಪರೆ ಈಗಲೂ ಅಲ್ಲಿ ಉಳಿದುಕೊಂಡಿದೆ. ಕರ್ನಾಟಕ ಕರಾವಳಿಯಲ್ಲಿ ಜನರಿಗೆ ಬೇಕಾದಂತಹ ಬಟ್ಟೆಯನ್ನು ಪೂರೈಸಲು ರಾಜನ ಅಹ್ವಾನದ ಮೇರೆಗೆ ಬಾರಕೂರಿಗೆ ಆಗಮಿಸಿದ ಶೆಟ್ಟಿಗಾರ್ /ಪದ್ಮಶಾಲಿಗರು ಕಾಳಿ ದೇವಿಯನ್ನು ಪೂಜಿಸುತ್ತಿದ್ದರು. ನಂತರ ವೀರಭದ್ರ ದೇವರನ್ನು ಕುಲದೇವರಾಗಿ ಪೂಜಿಸಲು ಪ್ರಾರಂಭಿಸಿದರೆಂದು ತಿಳಿದು ಬರುತ್ತದೆ. ಕಂಚಿಯಿಂದ ಬಾರ ಕೂರಿಗೆ ಬಂದು, ಕಾಸರಗೋಡು ಜಿಲ್ಲೆ ತನಕ ವಲಸೆ ಹೋದ ಈ ಸಮುದಾಯದವರು, ಅಲ್ಲಲ್ಲಿ ಕುಲದೇವರಾದ ಶ್ರೀ ವೀರಭದ್ರ ಹಾಗೂ ದೇವಿಯನ್ನು ಆರಾಧಿಸುತ್ತಿದ್ದರೂ ಕೂಡ ಮೂಲ ಕ್ಷೇತ್ರವಾದ ಬಾರಕೂರಿಗೆ ಆಗಮಿಸಿ ಪೂಜೆ ಪ್ರಾರ್ಥನೆ ಮತ್ತು ಹರಕೆ ಸಲ್ಲಿಸುತ್ತಿದ್ದಾರೆ.

ಈ ಕ್ಷೇತ್ರದ ದೈವ ದೇವರುಗಳ ಪೂಜಾ ವಿನಿಯೋಗಕ್ಕೆ ಬೇಕಾದಷ್ಟು ಆದಾಯ ತರುವ ಭೂಮಿಯನ್ನು ಹೊಯ್ಸಳ ಚಕ್ರವರ್ತಿ ವೀರ ಬಲ್ಲಾಳನು ಕ್ರಿ.ಶ 1333ರಲ್ಲಿ ದಾನವಾಗಿ ನೀಡಿದ್ದು, ಬದಲಾದ ಕಾನೂನಿನಿಂದಾಗಿ ದೇವಳದ ಭೂಮಿಯು ಪರಾಧೀನವಾಗಿದ್ದು ಕೇವಲ 13 ಸೆಂಟ್ಸ್ ಭೂಮಿ ಮಾತ್ರ ಉಳಿದಿತ್ತು. ನಂತರ ಸುಮಾರು 75 ಸೆಂಟ್ಸ್ ಭೂಮಿಯನ್ನು ತಮ್ಮೆಲ್ಲರ ಸಹಕಾರದಿಂದ ಖರೀದಿಸಲಾಗಿದೆ. ಈ ಕ್ಷೇತ್ರದಲ್ಲಿರುವ ಶ್ರೀ ಬ್ರಹ್ಮಲಿಂಗ ವೀರಭದ್ರ, ಶ್ರೀ ದುರ್ಗಾಪರಮೇಶ್ವರಿ, ಶ್ರೀ ಮಹಾಗಣಪತಿ, ನಾಗದೇವರು ಮತ್ತು ಕುಮಾರ ಮೊದಲಾದ ಕಾರಣೀಕದಿಂದ ಕೂಡಿದ ದೈವ ದೇವರುಗಳಿಗೆ ಕಾಲಕಾಲಕ್ಕೆ ನೆರವೇರಿಸುವ ಪೂಜೆ ಉತ್ಸವದೊಂದಿಗೆ ಹರಕೆ ಸೇವೆಗಳನ್ನೂ ಸಮರ್ಪಿಸಲಾಗುತ್ತಿದೆ. ಜೀವನೋದ್ಧಾರದ ನಂತರ ಪ್ರತೀ ತಿಂಗಳ ಮೊದಲ ಭಾನುವಾರದಂದು ನಿರಂತರ 222 ತಿಂಗಳಿಂದ ( ನಾಲ್ಕು ಉದ್ಯಾಪನೆಯೊಂದಿಗೆ) ಶ್ರೀ ಸತ್ಯನಾರಾಯಣ ಪೂಜೆ- ಅನ್ನ ಸಂತರ್ಪಣೆ ನಡೆಸಲಾಗುತ್ತಿದ್ದು, ಸೇವಾಕರ್ತರಲ್ಲಿ ನಮ್ಮ ಸಮಾಜದ ಇತರ ದೇವಸ್ಥಾನಗಳ ಭಕ್ತ ಕುಟುಂಬದವರೂ ಇದ್ದಾರೆ ಎನ್ನುವುದು ಈ ಕ್ಷೇತ್ರದ ಮಹಿಮೆಗೆ ಸಾಕ್ಷಿಯಾಗಿದೆ. ಕ್ಷೇತ್ರದ ಜೀರ್ಣೋದ್ದಾರದದ ಸಂದರ್ಭದಲ್ಲಿ ಮತ್ತು ಈಗಲೂ ಅ ಶರೀರವಾಣಿಯಂತಹ ಅನೇಕ ರೀತಿಯ ಪವಾಡಗಳು ನಡೆಯುತ್ತಿವೆ.

2005ರ ಜೀರ್ಣೋದ್ಧಾರದ ದಾನಿಗಳ ಹೆಸರಿನ ಜೊತೆಗೆ ಅವರ ತಂದೆ -ತಾಯಿ, ಅಜ್ಜ-ಅಜ್ಜಿಯರ ಹೆಸರನ್ನು ಶಿಲಾಪಲಕದಲ್ಲಿ ದಾಖಲಿಸಿದ್ದು, ಅವರಲ್ಲಿ ಕೆಲವರು ಮರಿ ಮಕ್ಕಳನ್ನು ಕಂಡಿದ್ದು, ಅವರಿಗೆ ಆರು ತಲೆಮಾರಿನವರ ಹೆಸರು ತಿಳಿಯಲು ಇದರಿಂದ ಸಾಧ್ಯವಾಗಿದೆ. ಈಗ ತಾವು ನೀಡಿದ ದೇಣಿಗೆ ಮತ್ತು ಸೇವೆ ಶ್ರೀ ಕ್ಷೇತ್ರದ ಶಿಲಾಫಲಕದಲ್ಲಿ ದಾಖಲೆಗೊಂಡು ನಿಮ್ಮ ಮುಂದಿನ ಪೀಳಿಗೆಯವರು ನಿಮ್ಮ ಸೇವೆಯನ್ನು ನೆನಪಿಸಿಕೊಂಡು ಅವರು ಕೂಡ ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳಲು ಪ್ರೇರಣೆ ಯಾಗುತ್ತದೆ. ಇಂತಹ ಪರಂಪರೆಯನ್ನು ಪ್ರಾಚೀನ ಕಾಲದಲ್ಲಿ ರಾಜರು, ದಾನ ಶಾಸನಗಳಲ್ಲಿ ತಮ್ಮ ಹೆಸರಿನೊಂದಿಗೆ ಅವರ ಪೂರ್ವಜರ ಹೆಸರನ್ನು ದಾಖಲಿಸುವ ಮೂಲಕ ಅವರೆಲ್ಲರನ್ನು ನೆನಪಿಸಿ ಗೌರವಹಿಸುವ ಪದ್ಧತಿಯನ್ನು ಪ್ರಾರಂಭಿಸಿದ್ದು, ನಾವು ಅದನ್ನು ಮುಂದುವರಿಸಿದ್ದೇವೆ.

ಜೀರ್ಣೋದ್ಧಾರದ ನಂತರ ಮೇಲ್ವಿಚಾರಕರ ಮನೆ, ಪ್ರಾಕಾರ ಗೋಡೆ, ಮೇಲ್ಚಾವಣಿ, ಪಾಕಶಾಲೆ, ಭೋಜನ ಶಾಲೆ, ಸ್ಥಳ ಖರೀದಿಯಂತಹ ವಿವಿಧ ಯೋಜನೆಗಳನ್ನು ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ತಮ್ಮೆಲ್ಲರ ಅಭೂತಪೂರ್ವ ದೇಣಿಗೆಯಿಂದ ಸಾಕಾರಗೊಂಡಿದೆ.

ಪ್ರಸ್ತುತ ಸುಮಾರು ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯದೊಂದಿಗೆ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಮಾಡುವುದರ ಮೂಲಕ ನಂಬಿದ ಎಲ್ಲಾ ಭಕ್ತ ಕುಟುಂಬದವರ ಹಾಗೂ ಸಮಸ್ತ ಸಮಾಜ ಬಾಂಧವರ ಶ್ರೇಯೋಭಿವೃದ್ಧಿ ಆಗಬೇಕೆನ್ನುವುದು ಭಕ್ತರ ಅಭಿಲಾಷೆಯಾಗಿದೆ ಹಾಗಾಗಿ ಭಕ್ತಾದಿಗಳಾದ ತಾವು ಈ ಪುಣ್ಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು, ತನು ಮನ ಧನ ಸೇವೆ ನೀಡಿ ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.

Related Articles

Back to top button
error: Content is protected !!