ಬಟ್ಟೆಯ ಮೇಲೆ ಮಗು ಮಲವಿಸರ್ಜನೆ: ಮೈ ಗಲೀಜಾಗಿದ್ದಕ್ಕೆ ತಾಯಿಯ ಪ್ರಿಯಕರ ಕತ್ತು ಹಿಸುಕಿ ಕೊಂದ!
Views: 170
ಕನ್ನಡ ಕರಾವಳಿ ಸುದ್ದಿ: 3 ವರ್ಷದ ಬಾಲಕನೊಬ್ಬ ಮಗು ಮಲಗಿದ್ದಾಗ ಆಕಸ್ಮಿಕವಾಗಿ ಆತನ ತಾಯಿಯ ಪ್ರಿಯಕರನ ಬಟ್ಟೆಯ ಮೇಲೆ ಮಲವಿಸರ್ಜನೆ ಮಾಡಿದ್ದು, ಇದರಿಂದ ಕೋಪಗೊಂಡ ಆತ ಆ ಮಗುವನ್ನು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ವರದಿಯಾಗಿದೆ.
ಡಿಸೆಂಬರ್ 11ರ ರಾತ್ರಿ ಮಲಗಲು ಹೋದಾಗ ಕುಡಿದಿದ್ದ ಮೌಲಾಲಿ ಅಲಿಯಾಸ್ ಅಕ್ಟರ್ ರಜಾಕ್ ಬಾಲಕ ಫರ್ಹಾನ್ನ ಕತ್ತು ಹಿಸುಕಿ ಕೊಂದಿದ್ದಾನೆ.
ರಾತ್ರಿ ಫರ್ಹಾನ್ ಎಂಬ ಆ ಮಗುವಿನ ಪಕ್ಕದಲ್ಲಿ 44 ವರ್ಷದ ಮೌಲಾಲಿ ಮಲಗಿದ್ದ. ಆ ಮಗುವಿನ ತಾಯಿ ಕೆಲಸಕ್ಕೆ ಬೇರೆ ಮನೆಗೆ ಹೋಗಿದ್ದವಳು ಇನ್ನೂ ಬಂದಿರಲಿಲ್ಲ. ಈ ವೇಳೆ ಆ ಮಗು ಮಲವಿಸರ್ಜನೆ ಮಾಡಿದೆ. ಕುಡಿತದ ಅಮಲಿನಲ್ಲಿ ಮಲಗಿದ್ದ ಆತನಿಗೆ ತನ್ನ ಮೈ ಗಲೀಜಾಗಿದ್ದಕ್ಕೆ ಕೋಪ ಬಂದಿದೆ. ಬಳಿಕ ಮಗುವಿಗೆ ಹೊಡೆದು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.
ತಾಯಿ 28 ವರ್ಷದ ಶಹನಾಜ್ ಶೇಖ್ ಮನೆಗೆ ಮರಳಿದಾಗ ಫರ್ಹಾನ್ ಮೇಲಿಂದ ಬಿದ್ದಿದ್ದಾನೆಂದು ಆತ ಅವಳಿಗೆ ಹೇಳಿದ್ದ. ಅವಳು ಕೂಡ ಆ ಮಾತನ್ನು ನಂಬಿದ್ದಳು. ನಂತರ ಆ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಅವನನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚಿಸಿದಾಗ ಆ ತಾಯಿ ತನ್ನ ಮಗುವನ್ನು ಕರ್ನಾಟಕದ ವಿಜಯಪುರಕ್ಕೆ ಕರೆದೊಯ್ದಳು. ಅಲ್ಲಿ ಬಸ್ ನಿಲ್ದಾಣದಿಂದ ಆಕೆಯ ಪ್ರಿಯಕರ ಪರಾರಿಯಾಗಿದ್ದ.
ಕೊನೆಗೆ ಶಹನಾಜ್ ತನ್ನ ಮೊದಲ ಪತಿಯ ಸಹಾಯದಿಂದ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಳು. ಆದರೆ, ಆಸ್ಪತ್ರೆಗೆ ಬರುವಷ್ಟರಲ್ಲಿ ಮಗು ಮೃತಪಟ್ಟಿತ್ತು.
ಮರಣೋತ್ತರ ಪರೀಕ್ಷೆಯಲ್ಲಿ ಕತ್ತು ಹಿಸುಕಿದ್ದರಿಂದ ಮಗು ಸಾವನ್ನಪ್ಪಿದೆ ಎಂದು ದೃಢಪಡಿಸಲಾಯಿತು. ಬಳಿಕ ಆ ತಾಯಿಯೇ ತನ್ನ ಪ್ರಿಯಕರನ ವಿರುದ್ಧ ದೂರು ನೀಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.






