ಪುಂಜಾಲಕಟ್ಟೆ :ಬಾಡಿಗೆಗೆ ಹೋಗಿದ್ದ ರಿಕ್ಷಾ ಚಾಲಕ ನಿಗೂಢ ನಾಪತ್ತೆ

Views: 123
ಪುಂಜಾಲಕಟ್ಟೆ: ಬಾಡಿಗೆಗೆ ಹೋಗಿದ್ದ ರಿಕ್ಷಾ ಚಾಲಕರೋರ್ವರು ನಿಗೂಢವಾಗಿ ನಾಪತ್ತೆಯಾದ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ.
ಬುಧವಾರ ರಾತ್ರಿಯಿಂದ ಆಟೋ ಚಾಲಕ ನಿಗೂಢವಾಗಿ ನಾಪತ್ತೆಯಾಗಿದ್ದು, ಗುರುವಾರ ಅಡ್ಡೂರು-ಪೊಳಲಿ ಸೇತುವೆಯಲ್ಲಿ ಅನುಮಾನಾಸ್ಪದವಾಗಿ ಎಂಜಿನ್ ಚಾಲನೆ ಸ್ಥಿತಿಯಲ್ಲಿ ರಿಕ್ಷಾ ಪತ್ತೆಯಾಗಿದೆ.
ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ನೇಲ್ಯಕುಮೇರ್ ಬಾಬು ಪೂಜಾರಿ ಅವರ ಪುತ್ರ ಗಿರೀಶ್ (37) ಕಾಣೆಯಾದವರು ಎಂದು ತಿಳಿಯಲಾಗಿದೆ.
ಗಿರೀಶ್ ಎಣ್ಮೂರು ಶ್ರೀ ನಾಗಬ್ರಹ್ಮ ದೈವಸ್ಥಾನದ ಬೈದರ್ಕಳ ಗರಡಿಯಲ್ಲಿ ಕೋಟಿಯ ದರ್ಶನಪಾತ್ರಿಯಾಗಿದ್ದರು.
ಬಜಪೆ ವಿಮಾನ ನಿಲ್ದಾಣಕ್ಕೆ ಬಾಡಿಗೆ ಇದೆ ಎಂದು ಹೇಳಿ ತಡರಾತ್ರಿ ಎರಡು ಗಂಟೆಯ ಹೊತ್ತಿಗೆ ಗಿರೀಶ್ ರಿಕ್ಷಾದಲ್ಲಿ ಹೊರಟವರು ನಾಪತ್ತೆಯಾಗಿದ್ದಾರೆ.
ರಾತ್ರಿ ಗಸ್ತಿನಲ್ಲಿದ್ದ ಬಜಪೆ ಪೊಲೀಸರು ಅನುಮಾನಾಸ್ಪದವಾಗಿ ಎಂಜಿನ್ ಚಾಲನೆಯಲ್ಲೇ ನಿಂತಿದ್ದ ರಿಕ್ಷಾವನ್ನು ಪರಿಶೀಲಿಸಿದರು. ಪರಿಸರದಲ್ಲಿ ಹುಡುಕಿದರೂ ಚಾಲಕನ ಪತ್ತೆಯಾಗಲಿಲ್ಲ, ಬಳಿಕ ರಿಕ್ಷಾದಲ್ಲಿ ದೊರೆತ ದಾಖಲೆ ಪತ್ರದ ಆಧಾರದಲ್ಲಿ ಅವರ ಮನೆಗೆ ಮಾಹಿತಿ ನೀಡಿದರು.
ಗುರುವಾರ ಬೆಳಗ್ಗಿನಿಂದ ಅಗ್ನಿ ಶಾಮಕ ದಳದ ಸಿಬಂದಿ ಪೊಲೀಸರು ಹಾಗೂ ಸ್ಥಳೀಯರ ಸಹಕಾರದಲ್ಲಿ ಪೊಳಲಿಯ ಫಲ್ಗುಣಿ ನದಿ ಸಹಿತ ವಿವಿಧೆಡೆ ಶೋಧ ನಡೆಸಿದರು. ಸಂಜೆಯವರೆಗೂ ಗಿರೀಶ್ ಸುಳಿವು ಸಿಗಲಿಲ್ಲ.
ಅವರ ಪತ್ನಿ ತಾರಾ ಅವರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.






