ಇತರೆ

ಪಿಎಸ್‌ಐ ಮೇಲೆ ವರದಕ್ಷಿಣೆ ಕಿರುಕುಳ ಆರೋಪ: ಪತ್ನಿಯಿಂದ ದೂರು

Views: 18

ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‌ಐ ಬೈರಪ್ಪ ವಿರುದ್ಧ ಅವರ ಪತ್ನಿ ರೇವತಿ ವರದಕ್ಷಿಣೆ ಕಿರುಕುಳ ಹಾಗೂ ಗೃಹ ಹಿಂಸೆ ಆರೋಪ ಮಾಡಿ ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ವರದಕ್ಷಿಣೆ ಬೇಡಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಹಲ್ಲೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ. ರೇವತಿ ನೀಡಿರುವ ದೂರಿನ ಪ್ರಕಾರ, ಮದುವೆಯಾದ ನಂತರ ‘ಸೈಟ್ ಕೊಟ್ಟಿಲ್ಲ, ಮನೆ ಕೊಟ್ಟಿಲ್ಲ’ ಎಂದು ಪದೇ ಪದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ನಿರಂತರವಾಗಿ ವರದಕ್ಷಿಣೆಗಾಗಿ ಒತ್ತಡ ಹೇರಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನಲ್ಲಿ ಮತ್ತೊಂದು ಗಂಭೀರ ಆರೋಪ ಮಾಡಲಾಗಿದ್ದು, ಪಿಎಸ್‌ಐ ಬೈರಪ್ಪ ಅವರು ಮದ್ಯ ಸೇವಿಸಿ ಮನೆಗೆ ಬಂದು ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದರು ಎಂದು ರೇವತಿ ಆರೋಪಿಸಿದ್ದಾರೆ. ಈ ಘಟನೆಗಳಿಂದ ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಕಿರುಕುಳ ಅನುಭವಿಸಿರುವುದಾಗಿ ಅವರು ಪೊಲೀಸರಿಗೆ ತಿಳಿಸಿದ್ದಾರೆ.

ರೇವತಿ ನೀಡಿರುವ ದೂರಿನ ಆಧಾರದ ಮೇಲೆ ಕೆಂಗೇರಿ ಪೊಲೀಸ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಗಳ ಕುರಿತು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಎರಡೂ ಪಕ್ಷಗಳ ಹೇಳಿಕೆಗಳನ್ನು ದಾಖಲಿಸಿಕೊಂಡು, ಲಭ್ಯವಿರುವ ಸಾಕ್ಷ್ಯಾಧಾರಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಸದ್ಯ ಪ್ರಕರಣ ತನಿಖೆ ಹಂತದಲ್ಲಿದ್ದು, ಪತ್ನಿ ಮಾಡಿರುವ ಆರೋಪಗಳ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ತನಿಖೆಯ ವರದಿ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.

Related Articles

Back to top button
error: Content is protected !!