ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ:ಪತಿ ಕುಟುಂಬಸ್ಥರ ವಿರುದ್ಧವೇ ಕೊಲೆ ಆರೋಪ
Views: 56
ಕನ್ನಡ ಕರಾವಳಿ ಸುದ್ದಿ : ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿದ್ದು, ಪತಿ ಕುಟುಂಬಸ್ಥರ ವಿರುದ್ಧವೇ ಕೊಲೆ ಆರೋಪ ಮಾಡಿರುವ ಘಟನೆ ಮೈಸೂರಿನ ಸರಸ್ವತಿಪುರಂನಲ್ಲಿ ನಡೆದಿದೆ.
ಸಂಧ್ಯಾ (30) ಮೃತ ದುರ್ದೈವಿ. ಈಕೆ ಹುಣಸೂರು ಪುರಸಭೆ ಮಾಜಿ ಅಧ್ಯಕ್ಷೆ ಗೀತಾ ನಿಂಗರಾಜು ಅವರ ಪುತ್ರಿ. ಮೈಸೂರು ನಗರದ ಸರಸ್ವತಿ ಪುರಂ ಜವರೇಗೌಡ ಪಾರ್ಕ್ ಸಮೀಪದ ನಿವಾಸದಲ್ಲಿ ಸಂಧ್ಯಾ ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಂಧ್ಯಾ ಅಕ್ಷಯ್ ಎಂಬುವವರನ್ನು ವಿವಾಹವಾಗಿದ್ದರು. ಮದುವೆಯಾದ ಕೆಲವು ಸಮಯದಿಂದ ಪತಿ, ಪತ್ನಿ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಪದೇ ಪದೇ ಜಗಳಗಳು ನಡೆಯುತ್ತಿದ್ದು, ದಂಪತಿ ನಡುವಿನ ಈ ಗಲಾಟೆಗಳು ವಿಕೋಪಕ್ಕೆ ಹೋಗಿದ್ದವು ಎಂದು ತಿಳಿದು ಬಂದಿದೆ.
ಸದ್ಯ ಏಕಾಏಕಿ ನೇಣು ಬಿಗಿದ ಸ್ಥಿತಿಯಲ್ಲಿ ಮಗಳ ಶವ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯಲ್ಲ ಪತಿಯೇ ಕೊಲೆ ಮಾಡಿದ್ದಾರೆಂದು ಸಂಧ್ಯಾ ಪೋಷಕರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಸರಸ್ವತಿಪುರಂ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.






