ರಾಜಕೀಯ

ನಾಳೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ..! ಡಿಕೆಶಿಗೆ ಮುಖ್ಯಮಂತ್ರಿ ಪಟ್ಟ?

Views: 73

ಕನ್ನಡ ಕರಾವಳಿ ಸುದ್ದಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಕೊನೆಗೂ ಕ್ಲೈಮ್ಯಾಕ್ಸ್ ಹಂತ ತಲುಪಿದೆ.ಅವರಿಗೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದ್ದು, ಡಿಸಿಎಂ ಡಿಕೆ ಶಿವಕುಮಾ‌ರ್ ನೂತನ ಮುಖ್ಯಮಂತ್ರಿಯಾಗಿ ಬಡ್ತಿ ಪಡೆಯುವ ಮುಹೂರ್ತ ಸನ್ನಿಹಿತವಾಗಿದೆ ಎಂಬ ಮಾತುಗಳು ಮಂಗಳವಾರ ರಾತ್ರಿ ಕಾಂಗ್ರೆಸ್ ವಲಯದಲ್ಲಿ ಹರಿದಾಡಿವೆ.

ನಾಯಕತ್ವ ವಿಚಾರವಾಗಿ ಗೊಂದಲ ಬಗೆಹರಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾ‌ರ್ ಅವರನ್ನು ದೆಹಲಿಗೆ ಆಹ್ವಾನಿಸಿದ್ದ ಪಕ್ಷದ ಹೈಕಮಾಂಡ್ ಮಂಗಳವಾರ ಇಬ್ಬರೂ ನಾಯಕರ ಜತೆ ಒಟ್ಟಾಗಿ ಹಾಗೂ ಪ್ರತ್ಯೇಕವಾಗಿ ಸುದೀರ್ಘ ಸಭೆ ನಡೆಸಿತು. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಜತೆ ಸಿದ್ದರಾಮಯ್ಯ, ಡಿಕೆ ಶಿವಕುಮಾ‌ರ್ ಸಭೆಯ ಬಳಿಕ ರಾಹುಲ್ ಗಾಂಧಿ ಇಬ್ಬರೂ ನಾಯಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಉಭಯ ನಾಯಕರಿಗೆ ರಾಹುಲ್ ಗಾಂಧಿ ನಿರ್ದಿಷ್ಟ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಸಿಎಂ ಸಿದ್ದರಾಮಯ್ಯ ಗುರುವಾರ ಬೆಳಿಗ್ಗೆ ಎಲ್ಲ ಸಚಿವರೊಂದಿಗೆ ಉಪಾಹಾರ ಕೂಟ ನಡೆಸಲಿದ್ದು, ಬಳಿಕ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ ಡಿಕೆ ಶಿವಕುಮಾರ್ ಬುಧವಾರ ಮಧ್ಯಾಹ್ನ ಬೆಂಗಳೂರಿಗೆ ಮರಳಲಿದ್ದು, ಅವರೊಂದಿಗೆ ಸುರ್ಜೆವಾಲಾ ಕೂಡ ಆಗಮಿಸುವ ಸಾಧ್ಯತೆ ಇದೆ. ಮಂಗಳವಾರ ಸಂಜೆ ಸಿಎಂ-ಡಿಸಿಎಂ ಜತೆ ಕಿರು ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ‘ರಾಜ್ಯಸಭಾ ಚುನಾವಣೆಯ ಸಲುವಾಗಿ ಸುದೀರ್ಘ ಸಮಾಲೋಚನೆ ನಡೆಸಲಾಗಿದೆ. ಮಾಧ್ಯಮಗಳಲ್ಲಿ ಬರುತ್ತಿರುವುದೆಲ್ಲವೂ ಊಹಾಪೋಹ’ ಎಂಬ ‘ಅಧಿಕೃತ’ ಹೇಳಿಕೆ ನೀಡಿದ್ದರು. ಆದರೆ, ವಾಸ್ತವದಲ್ಲಿ ನಾಯಕತ್ವ ಬದಲಾವಣೆಗೆ ವರಿಷ್ಠರು ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ತಡರಾತ್ರಿ ವೇಳೆಗೆ ಮೂಲಗಳಿಂದ ಖಚಿತ ಪಟ್ಟಿದೆ.

ಸಿದ್ದರಾಮಯ್ಯ ಗುರುವಾರ ಬೆಳಗ್ಗೆ ಎಲ್ಲ ಸಚಿವರೊಂದಿಗೆ ಉಪಾಹಾರ ಕೂಟ ಆಯೋಜಿಸಿದ್ದು, ಬಳಿಕ ಮಹತ್ವದ ಬೆಳವಣಿಗೆ ನಡೆಯಲಿದೆ ಎಂದು ತಿಳಿದು ಬಂದಿದೆ.

Related Articles

Back to top button
error: Content is protected !!