ಯುವಜನ

ಧರ್ಮಸ್ಥಳದ ಯುವತಿ ಪಂಜಾಬ್‌ನಲ್ಲಿ ನಿಗೂಢ ಸಾವಿಗೆ ಒಂದು ವರ್ಷ..ಹೆತ್ತವರ ನ್ಯಾಯಕ್ಕಾಗಿ ಹೋರಾಟ ನಿರಂತರ

Views: 20

ಕನ್ನಡ ಕರಾವಳಿ ಸುದ್ದಿ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪ್ರತಿಭಾನ್ವಿತ ಯುವತಿ ಆಕಾಂಕ್ಷ ಎಸ್. ನಾಯರ್ ಪಂಜಾಬ್‌ನಲ್ಲಿ ಅಸಹಜವಾಗಿ ಮೃತಪಟ್ಟು ಒಂದು ವರ್ಷ ಸಂದಿದೆ. ಮಗಳ ಸಾವಿನ ಹಿಂದಿನ ನಿಗೂಢತೆ ಮಾತ್ರ ಇನ್ನೂ ಬಯಲಾಗಿಲ್ಲ. ಹೆತ್ತವರ ನ್ಯಾಯಕ್ಕಾಗಿನ ಹೋರಾಟ ನಿರಂತರವಾಗಿ ಸಾಗಿದೆ.

ಧರ್ಮಸ್ಥಳದ ಬೋಳಿಯಾರ್ ನಿವಾಸಿಗಳಾದ ಸುರೇಂದ್ರನ್ ನಾಯರ್ ಮತ್ತು ಸಿಂಧೂದೇವಿ ದಂಪತಿಯ ಏಕೈಕ ಪುತ್ರಿ ಆಕಾಂಕ್ಷ,

ಏನಿದು ಘಟನೆ? : ಪಂಜಾಬ್‌ನನ ಲವಿ ಪ್ರೊಫೆಷನಲ್ ಯುನಿವರ್ಸಿಟಿಯಲ್ಲಿ (LPU) ಇಂಜಿನಿಯರಿಂಗ್ ಮುಗಿಸಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಜರ್ಮನಿಗೆ ಹೋಗಲು ಸಿದ್ಧತೆ ನಡೆಸುತ್ತಿದ್ದ ಆಕಾಂಕ್ಷ, ಸರ್ಟಿಫಿಕೇಟ್ ಪಡೆಯುವ ಉದ್ದೇಶದಿಂದ 2025ರ ಮೇ 15ರಂದು ಪಂಜಾಬ್‌ಗೆ ತೆರಳಿದ್ದರು. ಮೇ 17ರಂದು ಆಕೆ, ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂಬ ಬರಸಿಡಿಲಿನಂತಹ ಸುದ್ದಿ ಪೋಷಕರಿಗೆ ತಲುಪಿತ್ತು.

ಆಕಾಂಕ್ಷ ಸಾವಿನ ಬಗ್ಗೆ ಪೋಷಕರಿಗೆ ಮೊದಲಿನಿಂದಲೂ ಅನುಮಾನವಿತ್ತು. ಘಟನೆ ನಡೆದು ಸುಮಾರು 7-8 ತಿಂಗಳ ಬಳಿಕ ಕೈ ಸೇರಿದ ಮರಣೋತ್ತರ ಪರೀಕ್ಷಾ ವರದಿಯು ಈ ಅನುಮಾನವನ್ನು ಇನ್ನಷ್ಟು ಪುಷ್ಟಿಕರಿಸಿದೆ. ವರದಿಯಲ್ಲಿ ಆಕೆ ಕಟ್ಟಡದಿಂದ ಬೀಳುವ ಮೊದಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಸಂದೇಹ ಮೂಡಿದ ಮರಣೋತ್ತರ ಪರೀಕ್ಷೆ ವರದಿ

ಯುವತಿಯೊಬ್ಬಳಿಗೆ ಕಟ್ಟಡದಿಂದ ಬೀಳುವ ಮೊದಲೇ ಹೃದಯಾಘಾತವಾಗಲು ಹೇಗೆ ಸಾಧ್ಯ ಎಂಬುದು ಕುಟುಂಬದವರ ಪ್ರಶ್ನೆಯಾಗಿದೆ. ತನಿಖೆಯ ವಿವರಗಳನ್ನು ಕೋರಿ ಮಾಹಿತಿ ಹಕ್ಕಿನಡಿ (RTI) ಅರ್ಜಿ ಸಲ್ಲಿಸಿದರೂ ಪಂಜಾಬ್ ಪೊಲೀಸರಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ.ಘಟನೆ ನಡೆದ ಸ್ಥಳದ ಸಿಸಿಟಿವಿ ಫೂಟೇಜ್.ಆಕಾಂಕ್ಷಳ ಮೊಬೈಲ್ ಫೋನ್ ಡೇಟಾ.ಎಫ್.ಎಸ್.ಎಲ್ (FSL) ವರದಿ.ಸ್ಥಳ ಮಹಜರು ಫೋಟೋಗಳು ಮತ್ತು ತನಿಖಾ ತಂಡದ ವರದಿ.ಇವುಗಳನ್ನು ಒದಗಿಸುವಂತೆ ಪೆನ್ ಡ್ರೈವ್ ಮತ್ತು ವಿಳಾಸವಿರುವ ಕವರ್ ಕಳುಹಿಸಿಕೊಟ್ಟರೂ, ಹಿರಿಯ ಅಧಿಕಾರಿಗಳ ಅನುಮತಿ ಬೇಕು ಎಂಬ ಹಾರಿಕೆ ಉತ್ತರವನ್ನೇ ಪಂಜಾಬ್ ಪೊಲೀಸರು ನೀಡುತ್ತಿದ್ದಾರೆ ಎನ್ನಲಾಗಿದೆ.

ಮಗಳ ವಿದ್ಯಾಭ್ಯಾಸಕ್ಕಾಗಿ ಇದ್ದ ಮನೆಯನ್ನೂ ಕಳೆದುಕೊಳ್ಳುವಷ್ಟು ಸಾಲ ಮಾಡಿದ್ದ ಈ ದಂಪತಿ, ಮಗಳನ್ನು ಉನ್ನತ ಮಟ್ಟಕ್ಕೆ ಏರಿಸುವ ಕನಸು ಕಂಡಿದ್ದರು. ಇದೀಗ ಏಕೈಕ ಪುತ್ರಿಯನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳು, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದ್ದು, ಕರ್ನಾಟಕ ಸರ್ಕಾರವು ಪಂಜಾಬ್ ಸರ್ಕಾರದ ಮೇಲೆ ಒತ್ತಡ ಹೇರಿ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಮಾಡಬೇಕು ಎಂದು ಅವರು ಕಣ್ಣೀರು ಹಾಕುತ್ತಿದ್ದಾರೆ. ವಿಧಿಯ ಬರಹಕ್ಕೆ ಬೆಲೆ ತೆತ್ತಿರುವ ಈ ಕುಟುಂಬಕ್ಕೆ ನ್ಯಾಯ ಸಿಗುತ್ತದೆಯೇ? ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದೇ? ಕಾದು ನೋಡಬೇಕಿದೆ.

Related Articles

Back to top button
error: Content is protected !!