ದೇವಸ್ಥಾನಕ್ಕೆ ಹೋಗುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿಗೆ ಬೈಕ್ ಡಿಕ್ಕಿಯಾಗಿ ಸಾವು

Views: 278
ಕಾರ್ಕಳ: ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದು 10ನೇ ತರಗತಿ ವಿದ್ಯಾರ್ಥಿನಿ ಪ್ರಣಮ್ಯ ಶೆಟ್ಟಿ (14) ಮೃತಪಟ್ಟ ಘಟನೆ ಕಾರ್ಕಳದ ನಂದಳಿಕೆಯಲ್ಲಿ ನಡೆದಿದೆ.
ಹತ್ತನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿನಿ ಶನಿವಾರ ಸಂಜೆ ಸ್ಥಳೀಯ ಲಕ್ಷ್ಮೀ ಜನಾರ್ದನ ದೇವಸ್ಥಾನಕ್ಕೆ ಎಂದು ಮನೆಯಿಂದ ಹೊರಟ ಈಕೆಗೆ ಬೈಕ್ ಢಿಕ್ಕಿಯಾಗಿತ್ತು. ಬೈಕ್ ಸವಾರ ರಸ್ತೆಯಿಂದ ತೀರಾ ಎಡಬದಿಗೆ ಬಂದು ಪ್ರಣಮ್ಯ ಅವರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿತ್ತು.
ತಲೆಗೆ ಗಂಭೀರ ಗಾಯಗೊಂಡ ಆಕೆಯನ್ನು ಕೂಡಲೇ ಕಾರ್ಕಳದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೈಕ್ ಸವಾರನ ಅಜಾಗರೂಕತೆಯ ಚಾಲನೆಯ ಪರಿಣಾಮ ಈ ಘಟನೆ ನಡೆದಿದೆ ಎಂದು ದೂರು ದಾಖಲಾಗಿದೆ.
ಚಿಕ್ಕ ಪ್ರಾಯದಲ್ಲಿ ತಂದೆಯನ್ನು ಕಳೆದುಕೊಂಡಿದ್ದರು. ತಾಯಿ ಗೇರು ಬೀಜ ಸಂಸ್ಥೆಯಲ್ಲಿ ಕೂಲಿ ಕಾರ್ಮಿಕೆಯಾಗಿರುವ ನಳಿನಿ ಶೆಟ್ಟಿ ಕಷ್ಟದಿಂದ ಇಬ್ಬರು ಹೆಣ್ಣು ಮಕ್ಕಳನ್ನು ಬೆಳೆಸಿದ್ದರು. ಇವರ ಎರಡು ಮಂದಿ ಪುತ್ರಿಯರಲ್ಲಿ ಮೃತರು ಕಿರಿಯವರು. ಬೆಳ್ಮಣ್ ಮುಲ್ಲಡ್ಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೆ ತರಗತಿ ಓದುತ್ತಿದ್ದರು. ಹಿರಿಯ ಸಹೋದರಿ ನಿಟ್ಟೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






