ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯಾಚಾರ: ತಲೆಮರೆಸಿಕೊಂಡಿದ್ದ ಪಾತ್ರಿ ಬಂಧನ
Views: 130
ಕನ್ನಡ ಕರಾವಳಿ ಸುದ್ದಿ: ದೆವ್ವ ಹಾಗೂ ಭೂತ ಬಿಡಿಸುವ ನೆಪದಲ್ಲಿ ಮಹಿಳೆಯ ಮೂಢನಂಬಿಕೆಯನ್ನು ಬಳಸಿಕೊಂಡು ನಿರಂತರವಾಗಿ ಅತ್ಯಾಚಾರ ಎಸಗಿದ್ದ ಆರೋಪಿ ಸತೀಶ್ ಪಾತ್ರಿಯನ್ನು ಕೊಪ್ಪ ಪೊಲೀಸರು ಬೆಂಗಳೂರಿನ ಜೆ.ಪಿ. ನಗರದಲ್ಲಿ ಬಂಧಿಸಿದ್ದಾರೆ.
ಹಾಸನ ಮೂಲದ ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸತತ ಶೋಧದ ನಂತರ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಹಾಗೂ ತೀರ್ಥಹಳ್ಳಿಯ ಕುದುರೆಗುಂಡಿಗೆ ಕರೆದೊಯ್ದು ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದರು. ಈ ಸಂಬಂಧ ಸಂತ್ರಸ್ತೆ ಕೊಪ್ಪ ಹಾಗೂ ಎನ್.ಆರ್. ಪುರ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಸತೀಶ್ ಪಾತ್ರಿ ಪರಾರಿಯಾಗಿದ್ದನು.
ಪ್ರಸ್ತುತ ಆರೋಪಿಯ ವಿರುದ್ಧ ಎನ್.ಆರ್. ಪುರ ಠಾಣೆಯಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆಯಡಿ ಹಾಗೂ ಕೊಪ್ಪ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.






