ದಕ್ಷಿಣ ಕನ್ನಡ: ಧಾರಾಕಾರ ಮಳೆ, ನಾಳೆ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ
ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಶುಕ್ರವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

Views: 91
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಇದರಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಜೂನ್ 28 ರಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಮುಂದುವರಿದಿದೆ. ಜೂನ್ 28 ರಂದು ರೆಡ್ ಅಲರ್ಟ್ ಘೋಷಣೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ವರೆಗೆ ರಜೆ ಘೋಷಿಸಲಾಗಿದೆ.
ಪ್ರವಾಹ,ಭೂಕುಸಿತ ಪ್ರದೇಶಗಳನ್ನು ಗುರುತಿಸಿ, ಆಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ನೀರು ಇರುವ ತಗ್ಗು ಪ್ರದೇಶ. ಕೆರೆ, ನದಿ ತೀರ ಸಮುದ್ರ ತೀರಕ್ಕೆ ನಾರ್ವಜನಿಕರು ಪ್ರವಾಸಿಗರು ತೆರಳದಂತೆ ಜಾಗ್ರತೆ ವಹಿಸುವುದು. ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರು ನದಿಗಳು, ತೋಡುಗಳ ಮತ್ತು ವಿದ್ಯುತ್ ಕಂಬಗಳ,ತಂತಿ ಸಮೀಪ ಹೋಗದಂತೆ ಎಚ್ಚರಿಕೆ ವಹಿಸಬೇಕು.
ಸಂಭಾವ್ಯ ಹಾನಿಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಪಾಯಕಾರಿ ಸನ್ನಿವೇಶಗಳಿಂದ ದೂರವಿದ್ದು, ಜಿಲ್ಲಾಡಳಿತದ ಸಲಹೆ ಸೂಚನೆಗಳನ್ನು ಪಾಲಿಸಬೇಕು. ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಘಟನೆಗಳು ಸಂಭವಿಸಿದಲ್ಲಿ ಅಥವಾ ಸಂಭವಿಸಬಹುದಾದ ಸೂಚನೆ ಇದ್ದಲ್ಲಿ ಸಾರ್ವಜನಿಕರು ಕೂಡಲೇ ನಂಬಂಧಪಟ್ಟ ಪಂಚಾಯತ್ ನಗರ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿಯನ್ನು ನೀಡುವಂತೆ ಸೂಚಿಸಲಾಗಿದೆ.






