ಠೇವಣಿಯ ಬಡ್ಡಿಯಲ್ಲಿ ಆದಾಯ ತೆರಿಗೆ ಕಡಿತ

Views: 0
ಬ್ಯಾಂಕ್ ಮತ್ತು ಅಂಚೆ ಕಛೇರಿಗಳಲ್ಲಿ ನಾವು ಇರಿಸಿದ ಠೇವಣಿಯ ಮೇಲೆ ಬರುವ ಬಡ್ಡಿ ಆದಾಯ ತೆರಿಗೆಗೆ ಒಳಪಟ್ಟಿರುತ್ತದೆ. ಆದಾಯ ತೆರಿಗೆಯ ನಿಯಮಗಳ ಪ್ರಕಾರ ಬ್ಯಾಂಕ್ ಮತ್ತು ಅಂಚೆಕಛೇರಿಗಳು ಕೊಡುವ ಬಡ್ಡಿಯ 10% ಭಾಗವನ್ನು ಕಡಿತಗೊಳಿಸಿ ಆದಾಯ ತೆರಿಗೆ ಇಲಾಖೆಗೆ ಕಳಿಸಬೇಕಾಗುತ್ತದೆ. ಪಾನ್ ಕಾರ್ಡ್ ಇಲ್ಲದ ಸಂದರ್ಭಗಳಲ್ಲಿ 20% ಆದಾಯ ತೆರಿಗೆ ಹಿಡಿದುಕೊಳ್ಳಬೇಕಾಗುತ್ತದೆ. ಸಂಬಂಧಿತ ವ್ಯಕ್ತಿ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವಾಗ ಹೀಗೆ ಹಿಡಿದುಕೊಂಡ ತೆರಿಗೆಯನ್ನು (Tax deducted at source – TDS) ಲೆಕ್ಕಕ್ಕೆ ತೆಗೆದುಕೊಂಡು ಪಾವತಿ ಮಾಡಬೇಕಾಗಿರುವ ಉಳಿಕೆ ತೆರಿಗೆ ಹಣವನ್ನು ಕಟ್ಟಿದರೆ ಸಾಕಾಗುತ್ತದೆ. ಒಂದೊಮ್ಮೆ ಆ ವ್ಯಕ್ತಿಯು ಆದಾಯ ತೆರಿಗೆಯ ಮಿತಿಯೊಳಗೆ ಬರದಿದ್ದಲ್ಲಿ. ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿ TDS ಹಣವನ್ನು ಹಿಂದಕ್ಕೆ ಪಡೆಯಬಹುದು. ನಿವ್ವಳ ವಾರ್ಷಿಕ ಆದಾಯ (Net Annual Income) ರೂ.3 ಲಕ್ಷಕ್ಕಿಂತ ಕಡಿಮೆ ಇದ್ದವರು ಆದಾಯ ತೆರಿಗೆಗೆ ಒಳಪಡುವುದಿಲ್ಲ. ನಿವ್ವಳ ವಾರ್ಷಿಕ ಆದಾಯ ರೂ.7 ಲಕ್ಷದ ಒಳಗೆ ಇರುವವರು ಆದಾಯ ತೆರಿಗೆ ಸೆಕ್ಷನ್ 87A ಅಡಿಯಲ್ಲಿ ಸಿಗುವ ರಿಯಾಯಿತಿ ಪ್ರಕಾರ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ. (ಆದಾಯ ತೆರಿಗೆಯ ಹಳೆಯ ಪದ್ದತಿಯ ಪ್ರಕಾರ ಈ ಮಿತಿಯು ರೂ.5 ಲಕ್ಷಕ್ಕೆ ಸೀಮಿತವಾಗಿರುತ್ತದೆ.)
ಪಾನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಿಸುವುದು ಕಡ್ಡಾಯ. 30.06.2023 ರೊಳಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡದ ಪಾನ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗುವುದೆಂದು ಆದಾಯ ತೆರಿಗೆ ಇಲಾಖೆ ಈಗಾಗಲೇ ತಿಳಿಸಿದೆ.
ಉಳಿತಾಯ ಖಾತೆಗಳ ಮೇಲಿನ ಬಡ್ಡಿ ರೂ.10,000 ದ ವರೆಗೆ ತೆರಿಗೆ ವಿನಾಯಿತಿ ಪಡೆದಿರುತ್ತದೆ. ಹಿರಿಯ ನಾಗರಿಕರಿಗೆ (60 ವರ್ಷ ಮೇಲ್ಪಟ್ಟವರಿಗೆ) ರೂ.50,000 ದ ವರೆಗೆ ಠೇವಣಿಗಳ ಮೇಲಿನ ಬಡ್ಡಿಗೆ ತೆರಿಗೆ ವಿನಾಯಿತಿ ಇರುತ್ತದೆ.
ಒಂದೊಮ್ಮೆ ವ್ಯಕ್ತಿಯ ನಿವ್ವಳ ವಾರ್ಷಿಕ ಆದಾಯವು ಆದಾಯ ತೆರಿಗೆಯ ಕನಿಷ್ಠ ಮಿತಿಗಿಂತಲೂ ಕಡಿಮೆ ಇದ್ದರೆ, ಅವರು ಆದಾಯ ತೆರಿಗೆಯ ಫಾರಂ ನಂ. 15G ಯಲ್ಲಿ ಘೋಷಣೆ ಪತ್ರ (Declaration) ನೀಡಿದರೆ, ಬ್ಯಾಂಕ್ ಮತ್ತು ಅಂಚೆ ಕಛೇರಿಗಳು ಬಡ್ಡಿಯಲ್ಲಿ ತೆರಿಗೆ ಕಡಿತ ಮಾಡುವುದಿಲ್ಲ. ಹಿರಿಯ ನಾಗರಿಕರು ಈ ಘೋಷಣೆ ಪತ್ರವನ್ನು ಫಾರಂ ನಂ. 15H ನಲ್ಲಿ ಕೊಡಬೇಕು. ಫಾರಂ 15G ಅಥವಾ 15H ನ್ನು ವರ್ಷದ ಪ್ರಾರಂಭದಲ್ಲೇ ಅಂದರೆ ಏಪ್ರಿಲ್ ತಿಂಗಳಿನಲ್ಲೇ ಕೊಡಬೇಕಾಗುತ್ತದೆ. ಈ ಫಾರಂ ಅನ್ನು ಠೇವಣಿ ಇರುವ ಎಲ್ಲಾ ಬ್ಯಾಂಕುಗಳು ಮತ್ತು ಶಾಖೆಗಳಿಗೆ (ಮತ್ತು ಅಂಚೆ ಕಛೇರಿಗಳಿಗೆ) ಸಮಯಕ್ಕೆ ಸರಿಯಾಗಿ ನೀಡಬೇಕಾಗುತ್ತದೆ.
ನಾರಾಯಣ ಶೆಟ್ಟಿಗಾರ್, ಬೆಂಗಳೂರು
ಮೊ.9845660131






