ಜ್ಯೂಸ್ ಎಂದುಕೊಂಡು ಕೀಟನಾಶಕ ಕುಡಿದು 2 ವರ್ಷದ ಮಗು ಚಿಕತ್ಸೆ ಫಲಿಸದೇ ಸಾವು

Views: 0
ರಾಮನಗರ ಜಿಲ್ಲೆಯ ಕೃಷ್ಣಾಪುರದಲ್ಲಿ ಜಮೀನಿಗೆ ಸಿಂಪಡಣೆ ಮಾಡಲು ಇಟ್ಟಿದ್ದ ಕೀಟನಾಶಕವನ್ನು ಜ್ಯೂಸ್ ಎಂದುಕೊಂಡು ಕುಡಿದ 2 ವರ್ಷದ ಮಗು ಸಾವನ್ನಪ್ಪಿದೆ
ರಾಮನಗರ: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಮನೆಯಲ್ಲಿ ಇಟ್ಟಿದ್ದ ಕೀಟನಾಶಕವನ್ನು ಜ್ಯೂಸ್ ಎಂದು ಕುಡಿದು 2 ವರ್ಷದ ಮಗು ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಇನ್ನು ಈ ಘಟನೆ ನಿನ್ನೆ ನಡೆದಿದ್ದು, ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ಸಾವನ್ನಪ್ಪಿದೆ.
ಗ್ರಾಮದ ಹನುಮಂತು ಹಾಗೂ ಪುಷ್ಪ ದಂಪತಿಯ ಪುತ್ರ ಯಶ್ವಿಕ್(2) ಮೃತ ದುರ್ದೈವಿ ಮಗು
ಜಮೀನಿಗೆ ಸಿಂಪಡಿಸಲು ತಂದಿದ್ದ ಕೀಟನಾಶಕವನ್ನು, ಜ್ಯೂಸ್ ಎಂದು ತಿಳಿದುಕೊಂಡು ಓಪೆನ್ ಮಾಡಿದೆ. ನಂತರ, ಅದರಲ್ಲಿದ್ದ ವಿಷವನ್ನು ಜ್ಯೂಸ್ ಎಂದುಕೊಂಡು ಸೇವನೆ ಮಾಡಿದೆ. ಕ್ರಿಮಿನಾಶಕ ಸೇವನೆ ಬಳಿಕ ಹೊಟ್ಟೆ ನೋವಿನಿಂದ ಮಗು ಅಸ್ವಸ್ಥಗೊಂಡು ಬಿದ್ದಿದೆ. ಪೋಷಕರು ಬಾಯಿಯ ವಾಸನೆ ನೋಡಿದಾಗ ವಿಷ ಸೇವನೆ ಆಗಿರುವುದು ತಿಳಿದಿದೆ. ಕೂಡಲೇ ಮಗುವನ್ನ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು
ಮಂಡ್ಯದ ಆಸ್ಪತ್ರೆಯಲ್ಲಿ ಒಂದು ದಿನಗಳ ಕಾಲ ನಿರಂತರವಾಗಿ ಚಿಕಿತ್ಸೆಯನ್ನು ನೀಡಲಾಗಿದೆ. ಆದರೆ, ಮಗುವಿನ ಸ್ಥಿತಿ ಮಾತ್ರ ಚೇತರಿಕೆ ಕಂಡುಬಂದಿಲ್ಲ. ಇಂದು ಮಧ್ಯಾಹ್ನದ ವೇಳೆಗೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ. ಈ ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯಲ್ಲಿ ನಿರ್ಲಕ್ಷ್ಯವಹಿಸಿ ಮಕ್ಕಳ ಕೈಗೆ ವಿಷದ ಬಾಟಲಿ ಸಿಗುವಂತೆ ಇಡುವ ಮೂಲಕ ಮಗುವಿನ ಸಾವಿಗೆ ಕಾರಣವಾದ ಬಗ್ಗೆ ಮಮ್ಮಲ ಮರುಗುತ್ತಿದ್ದಾರೆ. ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ಮಡುಗಟ್ಟಿದೆ. ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.






