“ಜೆಸಿಬಿ ಪಕ್ಷ” ಸ್ಥಾಪನೆ ಮಾಡುವುದು ಖಚಿತ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
Views: 0
ಕನ್ನಡ ಕರಾವಳಿ ಸುದ್ದಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪ್ರಾದೇಶಿಕ ಪಕ್ಷವಾದ “ಜೆಸಿಬಿ (JCB) ಪಕ್ಷ” ಸ್ಥಾಪನೆ ಮಾಡುವುದು ಖಚಿತ ಎಂದು ಪುನರುಚ್ಚರಿಸಿದ್ದಾರೆ.
ಯಾರನ್ನೋ ಸಿಎಂ ಮಾಡಲು ನಾನು ಬಿಜೆಪಿಗೆ ಹೋಗು ವುದಿಲ್ಲ. ಬಿಜೆಪಿಗೆ ಸೇರ್ಪಡೆಯಾಗಲು ನನ್ನದೇ ಆದ ಷರತ್ತುಗಳಿವೆ. ಅವುಗಳಿಗೆ ಒಪ್ಪಿದರೆ ಮಾತ್ರ ಪಕ್ಷ ಸೇರುವೆ. ಇಲ್ಲವಾದರೆ ಜೆಸಿಬಿ ಪಕ್ಷ ರೆಡಿಯಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ತಾನು ವಿನಂತಿ ಮಾಡಿಕೊಂಡು ಬಿಜೆಪಿಗೆ ಹೋಗುವ ಅನಿವಾರ್ಯತೆ ಇಲ್ಲ. ಪಕ್ಷಕ್ಕೆ ಸೇರ್ಪಡೆ ಯಾಗುವ ಕುರಿತು ನಿರ್ಧಾರ ಕೈಗೊಳ್ಳುವ ಮೊದಲು ಕೆಲವು ಷರತ್ತುಗಳನ್ನು ಮುಂದಿಡುವೆ. ಅವುಗಳಿಗೆ ಒಪ್ಪಿಗೆ ಸೂಚಿಸಿದರೆ ಮಾತ್ರ ಬಿಜೆಪಿಗೆ ಮರಳುವ ಪ್ರಶ್ನೆ ಪರಿಗಣಿಸುವುದಾಗಿ ಸ್ಪಷ್ಟಪಡಿಸಿದರು.
ಜೆಸಿಬಿ ಪಕ್ಷದ ನೋಂದಣಿ ಸನ್ನಿಹಿತ
ಬಿಜೆಪಿಗೆ ಸೇರ್ಪಡೆಯಾಗುವ ವಿಚಾರದಲ್ಲಿ ತಮ್ಮ ಷರತ್ತುಗಳನ್ನು ಸ್ಪಷ್ಟಪಡಿಸಿರುವ ಯತ್ನಾಳ, ಮತ್ತೊಂದೆಡೆ ಜೆಸಿಬಿ ಪಕ್ಷದ ನೋಂದಣಿ ಕುರಿತು ಸುಳಿವು ನೀಡಿದ್ದಾರೆ. ಜೆಸಿಬಿ ರೆಡಿಯಾಗಿಯೇ ಇದೆ. ವಿಜಯಪುರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವೆ. ವಿಜಯದಶಮಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜೆಸಿಬಿ ಪಕ್ಷದ ನೋಂದಣಿ ಪ್ರಕ್ರಿಯೆಯೂ ಸನ್ನಿಹಿತವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ಉತ್ತರ ಕರ್ನಾಟಕದ ಜವಾಬ್ದಾರಿ ನೀಡಬೇಕು
ಉತ್ತರ ಕರ್ನಾಟಕದ ಭಾಗದಲ್ಲಿ ಟಿಕೆಟ್ ಹಂಚಿಕೆ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ತನಗೆ ವಹಿಸಬೇಕು ಎಂಬುದು ಯತ್ನಾಳ ಅವರ ಪ್ರಮುಖ ಬೇಡಿಕೆಯಾಗಿದೆ. ಉತ್ತರ ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಹಾಗೂ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ನೀಡಿದರೆ ಮಾತ್ರ ಬಿಜೆಪಿಗೆ ಸೇರುವ ಕುರಿತು ಚಿಂತನೆ ನಡೆಸುವೆ ಎಂದರು.
ನಾನು ದುಡಿದು ನಿರಾಣಿ ಅವರಿಗೋ ಅಥವಾ ಇನ್ನಾರಿಗೋ ಮುಖ್ಯಮಂತ್ರಿ ಸ್ಥಾನ ಕೊಡಿಸಲು ಪಕ್ಷಕ್ಕೆ ಹೋಗಬೇಕೆ? ಬಿಜೆಪಿಯನ್ನು ಬೆನ್ನತ್ತಿಕೊಂಡು ಹೋಗುವ ಅವಶ್ಯಕತೆ ನನಗಿಲ್ಲ. ನಾನು ವಿಧಿಸುವ ಷರತ್ತುಗಳಿಗೆ ಅವರು ಒಪ್ಪಿದರೆ ಮಾತ್ರ ಪಕ್ಷ ಸೇರುವೆ ಎಂದು ಯತ್ನಾಳ ಹೇಳಿದರು.






