ಇತರೆ

ಚಿನ್ನಯ್ಯ ತಂದ ತಲೆಬುರುಡೆ ರಹಸ್ಯ ಕೊನೆಗೂ ಬಯಲು..! ಎಸ್‌ಐಟಿ ತನಿಖೆಗೆ ಮಹತ್ವದ ತಿರುವು

Views: 234

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದಲ್ಲಿ ಹಲವಾರು ಮೃತ ದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿ ಬಂದ ಸಾಕ್ಷಿ ದೂರುದಾರ ಚಿನ್ನಯ್ಯ ತಾನು ನ್ಯಾಯಾಲಯಕ್ಕೆ ಬಂದಾಗ ತಂದಿದ್ದ ಬುರುಡೆಯ ರಹಸ್ಯ ಕೊನೆಗೂ ಬಹಿರಂಗಗೊಂಡಿದೆ.

ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಬುರುಡೆ ಕೊಟ್ಟಿದ್ದೇ ಸೌಜನ್ಯಾ ಮಾವ ವಿಠಲ ಗೌಡ ಎಂದು ತಿಳಿದುಬಂದಿದೆ. ಚಿನ್ನಯ್ಯ ಹಾಗೂ ವಿಠಲ ಗೌಡಗೆ ಹಳೆಯ ಸ್ನೇಹ. ನೇತ್ರಾವತಿ ನದಿ ತೀರದಲ್ಲಿ ಚಿಕ್ಕದಾದ ಹೋಟೆಲ್ ನಡೆಸುತ್ತಿದ್ದ ವಿಠಲ ಗೌಡ ಅವರ ಅಂಗಡಿಯಲ್ಲಿ ಚಿನ್ನಯ್ಯ ವಾಸವಾಗಿದ್ದ. ನದಿ ತೀರದಲ್ಲಿ ಭಕ್ತರು ಬಿಟ್ಟುಹೋಗಿದ್ದ ವಸ್ತುಗಳನ್ನು, ಮೃತದೇಹಗಳ ಪಕ್ಕದಲ್ಲಿ ಸಿಗುತ್ತಿದ್ದ ಚಿನ್ನಾಭರಣ ಸೇರಿದಂತೆ ಯಾವುದೇ ವಸ್ತುಗಳು ಸಿಕ್ಕರೂ ವಿಠಲಗೌಡಗೆ ತಂದು ಕೊಡುತ್ತಿದ್ದನಂತೆ ಎಂದು ತಿಳಿದುಬಂದಿದೆ.

ಈ ಬುರುಡೆಯನ್ನು ನೇತ್ರಾವತಿ ಸ್ನಾನಘಟ್ಟದ ಸಮೀಪ ಬಂಗ್ಲೆಗುಡ್ಡೆ ಅರಣ್ಯದಿಂದಲೇ ತಂದಿರುವುದು ಎಸ್‌ಐಟಿ ತನಿಖೆಯಲ್ಲಿ ಬಹಿರಂಗಗೊಂಡಿದೆ. ಸೌಜನ್ಯ ಮಾವ ವಿಠಲ ಗೌಡ ಹಾಗೂ ಹೋರಾಟಗಾರ ಜಯಂತ್‌ ಟಿ. ಅವರೊಂದಿಗೆ ಶನಿವಾರ ಸಂಜೆ ಸ್ಥಳಕ್ಕೆ ತೆರಳಿದ ಎಸ್‌ಐಟಿ ತಂಡ ಸ್ಥಳ ಮಹಜರು ನಡೆಸಿ ಮಹತ್ವದ ಸಾಕ್ಷಿ ಕಲೆ ಹಾಕಿದೆ.

ಸಾಕ್ಷಿ ದೂರುದಾರನಾಗಿ ಬಂದ ಚಿನ್ನಯ್ಯನ ಬಂಧನವಾದಾಗಿನಿಂದ ಆತ ತಂದಿದ್ದ ಬುರುಡೆಯ ಬಗ್ಗೆ ಹಲವಾರು ಊಹಾಪೋಹಗಳು ಎಲ್ಲೆಡೆ ಹರಿದಾಡಿದ್ದವು. ಅದರ ಬಗ್ಗೆ ದಿನಕ್ಕೊಂದರಂತೆ ಕತೆಗಳೂ ಸೃಷ್ಟಿಯಾಗಿದ್ದವು. ಆದರೆ ಇದೀಗ ಆತ ಹಾಜರು ಪಡಿಸಿದ ತಲೆಬುರುಡೆ ನೇತ್ರಾವತಿ ಸ್ನಾನಘಟ್ಟದ ಸಮೀಪದ ಅರಣ್ಯದಿಂದಲೇ ತರಲಾಗಿದೆ ಎಂಬುದು ಬಹಿರಂಗಗೊಂಡಿದ್ದು ಇದು ತನಿಖೆಗೆ ಮಹತ್ವದ ತಿರುವು ನೀಡಲಿದೆ

ಚಿನ್ನಯ್ಯ ತಂದ ತಲೆಬುರುಡೆಯನ್ನು ತೆಗೆಯುವ ವಿಡಿಯೋ ಒಂದು ಹಲವು ಮಾಧ್ಯಮಗಳಲ್ಲಿ ಬರುವ ಮೂಲಕ ಈ ಪ್ರಕರಣಕ್ಕೆ ಹೆಚ್ಚು ಮಹತ್ವ ಬಂದಿತ್ತು. ಅರಣ್ಯದ ಒಳಗೆ ಇರುವ ಈ ತಲೆಬುರುಡೆಯನ್ನು ಮೊದಲು ನೋಡಿರುವುದು ವಿಠಲ ಗೌಡ ಎಂದು ತಿಳಿದುಬಂದಿದ್ದು, ಬಳಿಕ ಜಯಂತ್‌ ಅವರೊಂದಿಗೆ ಅದನ್ನು ಹೊರತೆಗೆದಿರುವುದು ವಿಚಾರಣೆಯ ವೇಳೆ ಬಹಿರಂಗ ಗೊಂಡಿರುವುದಾಗಿ ತಿಳಿದು ಬಂದಿದೆ.

ಆ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಗಿರೀಶ್‌ ಮಟ್ಟೆಣ್ಣವರ್‌, ಜಯಂತ್‌ ಟಿ. ಹಾಗೂ ಸೌಜನ್ಯಾ ಮಾವ ವಿಠಲ ಗೌಡ ಹಾಗೂ ಯುಟ್ಯೂಬರ್‌ ಅಭಿಷೇಕ್‌ ಅವರ ನಿರಂತರ ವಿಚಾರಣೆ ನಡೆಸಲಾಗಿತ್ತು. ಬಹುತೇಕ ವಿಚಾರಣೆ ಪೂರ್ಣಗೊಂಡಿದೆ ಎನ್ನಲಾಗುತ್ತಿದೆ.

 

Related Articles

Back to top button