ಚಂದ್ರ ಗ್ರಹಣ ವೇಳೆ ಭೂರಿ ಭಕ್ಷ ಭೋಜನಗಳೊಂದಿಗೆ ಊಟ ಮಾಡಿ ಮೂಢನಂಬಿಕೆ ವಿರುದ್ಧ ಜಾಗೃತಿ ಕಾರ್ಯಕ್ರಮ

Views: 226
ಕನ್ನಡ ಕರಾವಳಿ ಸುದ್ದಿ: ಗ್ರಹಣ ಕಾಲದಲ್ಲಿ ಊಟ ಮಾಡಬಾರದು ಅನ್ನೋದು ಕೆಲವರ ನಂಬಿಕೆ. ಆದರೆ ಇದು ಮೂಢನಂಬಿಕೆ ಅನ್ನೋದು ಕೆಲವರ ವಾದ. ಹೀಗಾಗಿ ರಾಜ್ಯದ ಹಲವೆಡೆ ಮೂಢನಂಬಿಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ.
ಗ್ರಹಣ ಅನ್ನೋದು ಖಗೋಳದಲ್ಲಿ ನಡೆಯುವ ಅಪರೂಪದ ವಿಸ್ಮಯ. ನಭೋ ಮಂಡಲದಲ್ಲಿ ನಡೆಯುವ ನೆರಳಿನಾಟ. ಆದ್ರೆ, ವೈಜ್ಞಾನಿಕತೆಯ ಕಾಲದಲ್ಲೂ ಅವೈಜ್ಞಾನಿಕ ಆಚರಣೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಖಗ್ರಾಸ ಚಂದ್ರಗ್ರಹಣದ ವೇಳೆ ಕೆಲವು ಮೌಢ್ಯ ಆಚರಿಸೋದು ಸರ್ವೇಸಾಮಾನ್ಯ. ಇಂಥಹ ಮೌಢ್ಯತೆಯ ವಿರುದ್ಧ ಪ್ರಗತಿಪರರು ಸೆಡ್ಡು ಹೊಡೆದಿದ್ದಾರೆ
ಭೂರಿ ಭಕ್ಷ ಭೋಜನಗಳ ಸಾಲು, ಹಣ್ಣು-ಹಂಪಲು, ಬಗೆ ಬಗೆಯ ಖಾದ್ಯಗಳು ನೋಡಿದರೆ ನಾಲಿಗೆ ನೀರೂರಿಸುವಂತ ರುಚಿಕರ ಆಹಾರಗಳು. ಇದು ಗ್ರಹಣ ಕಾಲದಲ್ಲಿ ಬೆಂಗಳೂರಿನ ಟೌನ್‌ಹಾಲ್ ಮುಂಭಾಗ ಕಂಡುಬಂದ ದೃಶ್ಯ.
ಟೌನ್‌ಹಾಲ್ ಬಳಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 150ಕ್ಕೂ ಹೆಚ್ಚು ಮಂದಿ ಪ್ರಗತಿಪರರು ಬಗೆ ಬಗೆಯ ಆಹಾರವನ್ನು ಸೇವಿಸಿ ಜಾಗೃತಿಯನ್ನು ಮೂಡಿಸಿದರು. ಹಾಡುಗಳನ್ನು ಹಾಡುತ್ತಾ ಊಟ ಸೇವಿಸುತ್ತಾ, ಮಕ್ಕಳಿಗೂ ಊಟ ತಿನ್ನಿಸುತ್ತಾ ಮೌಢ್ಯಗಳ ವಿರುದ್ಧ ಸೆಡ್ಡು ಹೊಡೆದರು.
ಊಟ ಮಾಡಬೇಡ, ಹೊರಗಡೆ ಬರಬೇಡ ಎಂದು ಹೇಳಿದ್ದಾರೆ. ಆದರೆ ನಾವು ಹೊರಗಡೆ ಬಂದು ಊಟ ಮಾಡಿದ್ದೇವೆ. ಹಾಡು ಹೇಳಿಕೊಂಡು, ಡ್ಯಾನ್ಸ್ ಕೂಡ ಮಾಡಲಾಗಿದೆ. ಹಿಂದೆನೂ ಹೀಗೆ ಮಾಡಿದ್ದೇವೆ, ಮುಂದೆನೂ ಮಾಡುತ್ತೇವೆ ಎಂದಿದ್ದಾರೆ.