ಕೋಟ: ಕೋಕಾ ಕಾಯ್ದೆ ಪ್ರಕರಣದ ಪ್ರಮುಖ ಆರೋಪಿಗಳಾದ ಮನೋಜ್ ಕೋಡಿಕೆರೆ, ಚೇತು ಪಡೀಲ್ ಬಂಧನ
Views: 106
ಕನ್ನಡ ಕರಾವಳಿ ಸುದ್ದಿ:ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೋಕಾ ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿ, ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಮಾಹಿತಿ ನೀಡಿದವರಿಗೆ ಘೋಷಿತ ನಗದು ಬಹುಮಾನವನ್ನು ವಿತರಿಸಿದ್ದಾರೆ.
ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಸಾಸ್ತಾನದಲ್ಲಿ ನಡೆದ ಕಿಡ್ನಾಪ್ ಪ್ರಕರಣದ ಆರೋಪಿಗಳಾಗಿದ್ದ ಮನೋಜ್ ಕೋಡಿಕೆರೆ ಹಾಗೂ ಚೇತನ್ ಯಾನೆ ಚೇತು ಪಡೀಲ್ ಹಲವು ತಿಂಗಳುಗಳಿಂದ ತಲೆಮರೆಸಿ ಕೊಂಡಿದ್ದರು. ಸಾರ್ವಜನಿಕರಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಆರೋಪಿ ಚೇತು ಪಡೀಲ್‌ನನ್ನು ಎ. 30ರಂದು ಹಾಗೂ ಮನೋಜ್ ಕೋಡಿಕೆರೆಯನ್ನು ಜೂ. 11ರಂದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಸಾಸ್ತಾನದಲ್ಲಿ 2025ರ ನ.19ರಂದು ಸಿದ್ದಾಪುರ ನಿವಾಸಿ ಮೋಹನದಾಸ್ ಶೆಟ್ಟಿ ಅವರ ಪುತ್ರ ತೇಜಸ್ ಅವರನ್ನು ಅಪರಿಚಿತರು ಅಪಹರಿಸಿದ್ದು ಬಳಿಕ ಅವರ ತಂದೆ ಹಾಗೂ ಸ್ನೇಹಿತರಿಗೆ ಕರೆ ಮಾಡಿ 50 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಅನಂತರ 3 ಕೋ.ರೂ. ನೀಡದಿದ್ದಲ್ಲಿ ಯುವಕನನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಪ್ರಕರಣದ ತನಿಖೆ ವೇಳೆ ಆರೋಪಿ ಮನೋಜ್ ಕೋಡಿಕೆರೆಯ ಸೂಚನೆಯಂತೆ ಆತನ ಸಹಚರರು ಕೃತ್ಯ ಎಸಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ದೇವಿಪ್ರಸಾದ್ ಶೆಟ್ಟಿ ಸುಜಿತ್ ಅಂಜಾರು, ಸುದೀಪ್ ಕಾಟಿಪಾಳ್ಯ, ಶ್ರೀಷಾ ಶೆಟ್ಟಿ ಕೃಷ್ಣಾಪುರ, ಮಿಥುನ್ ಕಾಟಿಪಾಳ್ಯ, ಸುಹಾಸ್ ಕೆಮ್ಮಣ್ಣು ಹಾಗೂ ಮನೋಜ್ ವಿ. ಮನೋಜ್ ಕೊಟ್ಯಾನ್ ಹೂಡೆಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ ಪ್ರಮುಖ ಆರೋಪಿಗಳಾದ ಕೋಡಿಕೆರೆ ಹಾಗೂ ಚೇತನ್ ಪಡೀಲ್ ತಲೆಮರೆಸಿಕೊಂಡಿದ್ದರಿಂದ ಶೋಧ ಕಾರ್ಯ ಮುಂದುವರಿದಿತ್ತು.






