ಕೆಂಪು ಬಣ್ಣದಿಂದ ಕೇಸರಿ ಬಣ್ಣಕ್ಕೆ ಲೋಗೊ ಅನಾವರಣ ಮಾಡಿದ ದೂರದರ್ಶನ

Views: 59
ನವದೆಹಲಿ: ರಾಮನವಮಿ ದಿನವೇ ಕೇಂದ್ರ ಸರ್ಕಾರಿ ಪ್ರಾಯೋಜಿತ ಡಿಡಿ ನ್ಯೂಸ್ ಚಾನೆಲ್ನ ಲೋಗೊವನ್ನು ಕೇಸರಿಮಯವನ್ನಾಗಿ ಮಾಡಲಾಗಿದೆ. ಹೊಸ ಲೋಗೊ ಬಿಡುಗಡೆಯಾದ ಬೆನ್ನಲ್ಲೇ ಈಗ ಪರ-ವಿರೋಧ ಚರ್ಚೆಗಳು ಶುರುವಾಗಿವೆ.
“ನಮ್ಮ ಮೌಲ್ಯಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳುತ್ತಲೇ ನಿಮ್ಮೆದುರು ಹೊಸ ಅವತಾರದೊಂದಿಗೆ ಬಂದಿದ್ದೇವೆ. ಎಂದಿನಂತೆ ಸುದ್ದಿಯ ಪಯಣಕ್ಕೆ ನೀವೂ ಸಜ್ಜಾಗಿ. ಹೊಸ ಡಿಡಿ ನ್ಯೂಸ್ನ ಅನುಭವವನ್ನೂ ನೀವೂ ಪಡೆಯಿರಿ. ವೇಗಕ್ಕಿಂತ ನಿಖರತೆಗೆ, ಪ್ರಸ್ತಾಪಗಳಿಗಿಂತ ವಾಸ್ತವಾಂಶಗಳಿಗೆ, ಸೂಕ್ಷ್ಮತೆಯ ಬಣ್ಣಕ್ಕಿಂತ ಸತ್ಯದ ಕಡೆಗೆ ನಾವಿದ್ದೇವೆ ಎಂಬುದನ್ನು ಧೈರ್ಯವಾಗಿ ಹೇಳುತ್ತೇವೆ. ಡಿಡಿ ನ್ಯೂಸ್-ಸತ್ಯದ ಭರವಸೆ” ಎಂಬುದಾಗಿ ಡಿಡಿ ನ್ಯೂಸ್ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹೊಸ ಲೋಗೊ ಕುರಿತು ವಿಡಿಯೊ ಸಮೇತ ಪೋಸ್ಟ್ ಮಾಡಲಾಗಿದೆ.
ಕಳೆದ ಹಲವು ವರ್ಷಗಳಿಂದ ಡಿಡಿ ನ್ಯೂಸ್ ಲೋಗೊ ಕೆಂಪು ಬಣ್ಣದಿಂದ ಕೂಡಿತ್ತು. ಆದರೀಗ, ಆ ಬಣ್ಣವನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಲಾಗಿದೆ. ಡಿಡಿ ನ್ಯೂಸ್ ಲೋಗದ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕೆಂಪು ಬಣ್ಣವನ್ನು ಮಾತ್ರ ಕೇಸರಿ ಬಣ್ಣಕ್ಕೆ ಬದಲಾಯಿಸಲಾಗಿದೆ. ಹೊಸ ಲೋಗೊ ಬದಲಾಯಿಸುತ್ತಲೇ ಫೇಸ್ಬುಕ್, ಎಕ್ಸ್ ಸೇರಿ ಎಲ್ಲ ಜಾಲತಾಣಗಳಲ್ಲೂ ಹೊಸ ಲೋಗೊ ಕಾಣಿಸಿಕೊಂಡಿದೆ.






