ಕುಂಭಾಸಿ -ಕೊರವಡಿ:ಗಂಡನ ಮನೆಯವರಿಂದ ಕಿರುಕುಳ ಮಹಿಳೆ ಆತ್ಮಹತ್ಯೆ

Views: 993
ಕುಂದಾಪುರ: ವಿವಾಹಿತ ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಭಾಸಿ- ಕೊರವಡಿ ಎಂಬಲ್ಲಿ ರವಿವಾರ ನಡೆದಿದೆ.
ಮೃತಳ ತಾಯಿ ಪತಿ ಹಾಗೂ ಆತನ ಮನೆಯವರ ಕಿರುಕುಳದಿಂದ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿ ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ.
ಕೊರವಡಿ ಜಗದೀಶ್ ಅವರ ಪತ್ನಿ ಸೌಜನ್ಯಾ (27) ಆತ್ಮಹತ್ಯೆಗೆ ಶರಣಾದವರು. ಒಂದೂವರೆ ವರ್ಷದ ಹೆಣ್ಣು ಮಗುವನ್ನು ಅಗಲಿದ್ದಾರೆ.
ಕುಂಭಾಸಿಯ ಸೌಜನ್ಯಾ ಅವರ ವಿವಾಹವು ಕೊರವಡಿಯ ಜಗದೀಶ್ ಅವರೊಂದಿಗೆ 2021ರಲ್ಲಿ ನಡೆದಿತ್ತು.
ಎಪ್ರಿಲ್ 27ರಂದು ರಾತ್ರಿ 9 ಗಂಟೆಗೆ ಸೌಜನ್ಯಾ ತನ್ನ ಸೋದರಮಾವ ಉದಯ ಅವರಿಗೆ ಕರೆ ಮಾಡಿ ತನಗೆ ಪತಿ ಜಗದೀಶ, ಅವರ ತಾಯಿ ಚಂದು, ಪತಿಯ ಅಕ್ಕಂದಿರಾದ ಶೋಭಾ, ಶ್ಯಾಮಲಾ ಹಾಗೂ ಮೈದುನ ಪುಂಡಲೀಕ ತುಂಬಾ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿದ್ದರು.ಇದಕ್ಕೆ ಉದಯ ಅವರು ಬುದ್ಧಿವಾದ ಹೇಳಿ ಒಳ್ಳೆಯ ರೀತಿಯಲ್ಲಿ ಹೊಂದಿಕೊಂಡು ಸಂಸಾರ ನಡೆಸುವಂತೆ ತಿಳಿ ಹೇಳಿದ್ದರು.
ಸೌಜನ್ಯಾ ಅವರು ಮತ್ತೆ ರಾತ್ರಿ 9.45ರ ವೇಳೆಗೆ ಉದಯ ಅವರಿಗೆ ಕರೆ ಮಾಡಿ, ಪತಿ ಜಗದೀಶ್ ತನಗೆ ಹೊಡೆದು ಹಿಂಸೆ ನೀಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. ಅದರಂತೆ ಉದಯ ಅವರು ಜಗದೀಶ್ ಅವರ ಮನೆಗೆ ತೆರಳಿದ್ದು, ಈ ವೇಳೆ ಜಗದೀಶ್ ಅವರು ಪತ್ನಿ ಸೌಜನ್ಯಾ ಅವರನ್ನು ಎ. 28ರಂದು ತವರು ಮನೆಗೆ ಬಿಟ್ಟು ಹೋಗುವುದಾಗಿ ತಿಳಿಸಿದ್ದರು. ಆದರೆ ಎ. 27ರ ಮಧ್ಯರಾತ್ರಿ 12.34ಕ್ಕೆ ಜಗದೀಶ್ ಅವರು ಉದಯ ಅವರಿಗೆ ಕರೆ ಮಾಡಿ, ಕೂಡಲೇ ಮನೆಗೆ ಬನ್ನಿ ಎಂದು ತಿಳಿಸಿದ್ದರು. ಅದರಂತೆ ಉದಯ ಅವರು ಅಲ್ಲಿಗೆ ತೆರಳಿದಾಗ ಜಗದೀಶ್ ಅವರ ಮನೆಯವರು ಕಾರಿನಲ್ಲಿ ಮನೆಯಿಂದ ಕೋಟೇಶ್ವರದ ಆಸ್ಪತ್ರೆಗೆ ಹೊರಟಿದ್ದರು. ಉದಯ ಅವರನ್ನು ಹಿಂಬಾಲಿಸಿಕೊಂಡು ಆಸ್ಪತ್ರೆಯಲ್ಲಿ ಹೋಗಿ ವಿಚಾರಿಸಿದಾಗ ಸೌಜನ್ಯಾ ಅವರು ಪತಿಯ ಮನೆಯ ಒಳಗಡೆ ರಾತ್ರಿ 9.30ರಿಂದ ಮಧ್ಯರಾತ್ರಿ 12.30ರ ಮಧ್ಯದ ಅವಧಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತಿಳಿದುಬಂದಿತ್ತು.
ಘಟನಾ ಸ್ಥಳಕ್ಕೆ ಕುಂದಾಪುರ ವೃತ್ತ ನಿರೀಕ್ಷಕ ನಂದಕುಮಾರ್, ಎಸ್‌ಐ ವಿನಯ್ ಕೊರ್ಲಹಳ್ಳಿ ಹಾಗೂ ಸಿಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.






