ಕುಂಭಮೇಳದ ಮೊನಾಲಿಸಾಗೆ ಜನ್ಮ ದಿನಾಂಕ ವಿವಾದದಲ್ಲಿ ಹೈಕೋರ್ಟ್ ರಿಲೀಫ್
Views: 35
ಕನ್ನಡ ಕರಾವಳಿ ಸುದ್ದಿ: ಮಹಾಕುಂಭಮೇಳದಲ್ಲಿ ಮುತ್ತು-ಮಾಲೆ ಮಾರುತ್ತಾ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆಗೆ ಜನ್ಮ ದಿನಾಂಕ ವಿವಾದದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ರಿಲೀಫ್ ನೀಡಿದೆ.
2008ರ ಜನ್ಮ ದಿನಾಂಕವನ್ನು 2009ಕ್ಕೆ ಬದಲಿಸಿದ್ದ ಮಹೇಶ್ವರ ಪುರಸಭೆ ಅಧಿಕಾರಿಯ ಆದೇಶವನ್ನು ಕೋರ್ಟ್ ರದ್ದು ಮಾಡಿದೆ.
ಮೊನಾಲಿಸಾ ಕುಟುಂಬದ ವಿರೋಧದ ನಡುವೆಯೇ ನಟ ಫರ್ಮಾನ್ ಖಾನ್ ಅವರನ್ನು ಮದುವೆಯಾಗಿದ್ದರು. ಮದುವೆಯ ಬಳಿಕ ಅವರ ತಂದೆ ಜನ್ಮ ದಿನಾಂಕ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಆಧಾರದಲ್ಲಿ ದಾಖಲೆ ಬದಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಮೊನಾಲಿಸಾ ಹಾಗೂ ಅವರ ಪತಿ ಹೈಕೋರ್ಟ್ ಮೊರೆ ಹೋಗಿದ್ದರು.
ಜನ್ಮ ದಿನಾಂಕ ಬದಲಿಸುವ ಮುನ್ನ ಮೊನಾಲಿಸಾಗೆ ತನ್ನ ವಾದ ಹೇಳಲು ಅವಕಾಶ ನೀಡಬೇಕಿತ್ತು ಎಂದು ನ್ಯಾಯಮೂರ್ತಿ ಗಜೇಂದ್ರ ಸಿಂಗ್ ಹೇಳಿದ್ದಾರೆ. ತಂದೆಗೆ ಮಾಹಿತಿ ನೀಡಿದ್ರೆ ಸಾಕಾಗಲ್ಲ, ಹಕ್ಕುಗಳಿಗೆ ನೇರವಾಗಿ ಪರಿಣಾಮ ಬೀರುವ ಮೊನಾಲಿಸಾಗೆ ವಿಚಾರಣೆ ಅವಕಾಶ ನೀಡಬೇಕಿತ್ತು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಮೊನಾಲಿಸಾ ಜನ್ಮ ದಿನಾಂಕದ ಯಾವುದು?
ಮೊನಾಲಿಸಾ ಜನ್ಮ ದಿನಾಂಕದ ಬಗ್ಗೆ 2008 ಮತ್ತು 2009ರ ಎರಡು ದಾಖಲೆಗಳಿವೆ. ಆಧಾರ್, ಪ್ಯಾನ್ ಹಾಗೂ ವೋಟರ್ ಐಡಿಯಲ್ಲೂ 2008ರ ದಿನಾಂಕವೇ ಇದೆ. ಆದರೆ ನಿಜವಾದ ಜನ್ಮ ದಿನಾಂಕ ಯಾವುದು ಅನ್ನೋದನ್ನ ಕೋರ್ಟ್ ಇನ್ನೂ ನಿರ್ಧರಿಸಿಲ್ಲ. ಮೊನಾಲಿಸಾಗೆ ವಿಚಾರಣೆ ನಡೆಸಿ, ತಂದೆಯ ಅರ್ಜಿಯನ್ನು ಮರುಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಪತಿ ಫರ್ಮಾನ್ ವಿರುದ್ಧದ ಪೋಕ್ಸೊ ಕೇಸ್
ಜನ್ಮ ದಿನಾಂಕ ಬದಲಾದ್ರೆ ಮತದಾನದ ಹಕ್ಕು, ಆರ್ಥಿಕ ಸ್ವಾತಂತ್ರ್ಯ ಹಾಗೂ ಮದುವೆಯ ಆಯ್ಕೆಯ ಮೇಲೂ ಪರಿಣಾಮ ಬೀರುತ್ತೆ ಎಂದು ಕೋರ್ಟ್ ಹೇಳಿದೆ. ಆದರೆ ಈ ಆದೇಶದಿಂದ ಮೊನಾಲಿಸಾ-ಫರ್ಮಾನ್ ಮದುವೆ ಕಾನೂನುಬದ್ಧ ಅಂತ ಕೋರ್ಟ್ ಹೇಳಿಲ್ಲ. ಫರ್ಮಾನ್ ವಿರುದ್ಧದ ಪೋಕ್ಸೊ ಪ್ರಕರಣವನ್ನೂ ರದ್ದು ಮಾಡಿಲ್ಲ. ಕೇರಳದಲ್ಲಿ ಮದುವೆಯಾದ ಬಳಿಕ ಮೊನಾಲಿಸಾ ವಯಸ್ಸಿನ ಬಗ್ಗೆ ವಿವಾದ ಶುರುವಾಗಿದ್ದು, ಆಕೆ ಅಪ್ರಾಪ್ತಳು ಎಂದು ಹೇಳಿ ಮಧ್ಯಪ್ರದೇಶದಲ್ಲಿ ಫರ್ಮಾನ್ ವಿರುದ್ಧ ಪೋಕ್ಸೊ ಕೇಸ್ ದಾಖಲಾಗಿತ್ತು.
ಇನ್ನು ಮೊನಾಲಿಸಾ ನೀಡಿದ ದೂರಿನ ಆಧಾರದಲ್ಲಿ ಕೇರಳದಲ್ಲೂ ನಿರ್ದೇಶಕ ಸನೋಜ್ ಮಿಶ್ರಾ ಸೇರಿದಂತೆ ನಾಲ್ವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಆ ಪ್ರಕರಣಗಳ ಆರೋಪಗಳ ಬಗ್ಗೆ ಬುಧವಾರದ ಜನ್ಮ ಪ್ರಮಾಣಪತ್ರದ ತೀರ್ಪಿನಲ್ಲಿ ಹೈಕೋರ್ಟ್ ಯಾವುದೇ ನಿರ್ಧಾರ ನೀಡಿಲ್ಲ.






