ಕುಂದಾಪುರ: ಗಾಳಿ-ಮಳೆಗೆ ಜೋತು ಬಿದ್ದಿದ್ದ ವಿದ್ಯುತ್ ತಂತಿ ಸರಿಪಡಿಸಲು ಹೋದ ಯುವಕ ಸಾವು
Views: 129
ಕನ್ನಡ ಕರಾವಳಿ ಸುದ್ದಿ: ಜೋರಾದ ಗಾಳಿ-ಮಳೆಗೆ ಜೋತುಬಿದ್ದಿದ್ದ ವಿದ್ಯುತ್ ತಂತಿಯನ್ನು ಸರಿಪಡಿಸಲು ಹೋದ ಯುವಕನೊಬ್ಬ ವಿದ್ಯುತ್ ಆಘಾತದಿಂದ ಮೃತಪಟ್ಟ ಘಟನೆ ಹಿಲಿಯಾಣ ಗ್ರಾಮದ ಚೋರಾಡಿ ಕಲ್ಲುಗದ್ದೆ ಎಂಬಲ್ಲಿ ಜೂನ್ 7ರ ಭಾನುವಾರ ಸಂಜೆ ಸಂಭವಿಸಿದೆ.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್ ಮೃತಪಟ್ಟ ದುರ್ದೈವಿ. ಇವರು ಮೇ 18ರಂದು ದೈವದ ಕಾರ್ಯಕ್ರಮದ ನಿಮಿತ್ತ ಪತ್ನಿ ಅವರೊಂದಿಗೆ ಊರಿಗೆ ಬಂದಿದ್ದರು.
ಘಟನೆಯ ವಿವರ: ಭಾನುವಾರ ಸಂಜೆ ಸುಮಾರು 6:45ರ ವೇಳೆಗೆ ತಾಲೂಕಿನಾದ್ಯಂತ ಭಾರಿ ಗಾಳಿ-ಮಳೆ ಆರಂಭವಾಗಿತ್ತು. ಈ ವೇಳೆ ಗಾಳಿಯ ರಭಸಕ್ಕೆ ಮನೆಯ ಕೊಟ್ಟಿಗೆಯಲ್ಲಿದ್ದ ವಿದ್ಯುತ್ ವೈರ್ ಕೆಳಗೆ ಜೋತು ಬಿದ್ದಿತ್ತು. ಇದನ್ನು ಗಮನಿಸಿದ ಗಣೇಶ್ ಅವರು ವೈರ್ ಅನ್ನು ಮೇಲಕ್ಕೆ ಎತ್ತಿ ಕಟ್ಟಲು ಮುಂದಾಗಿದ್ದಾರೆ. ಆದರೆ, ವಿದ್ಯುತ್ ತಂತಿ ಹಳೆಯದಾಗಿದ್ದರಿಂದ ಹಠಾತ್ ತುಂಡಾಗಿ ಅವರ ಎದೆಯ ಭಾಗಕ್ಕೆ ತಾಗಿದೆ. ತೀವ್ರವಾಗಿ ಗಾಯಗೊಂಡ ಗಣೇಶ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಗಣೇಶ್ ಕುಸಿದು ಬಿದ್ದ ತಕ್ಷಣ ಅವರನ್ನು ವಾಹನವೊಂದರಲ್ಲಿ ಹಾಲಾಡಿಯ ದುರ್ಗಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ರಾತ್ರಿ 7:30ರ ಸುಮಾರಿಗೆ ಗಣೇಶ್ ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.






