ಕಲಬುರಗಿ ಜೈಲಲ್ಲಿ ಕೈದಿಗಳ ಜೂಜಾಟ: ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು
Views: 42
ಕನ್ನಡ ಕರಾವಳಿ ಸುದ್ದಿ: ಕಲಬುರಗಿ ನಗರದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ನಿಯಮ ಬಾಹಿರವಾಗಿ ಜೂಜಾಟ, ಮದ್ಯ ಹಾಗೂ ಧೂಮಪಾನ ಮಾಡುತ್ತಾ ಐಷಾರಾಮಿ ಜೀವನ ನಡೆಸುತ್ತಿರುವ ವಿಡಿಯೋ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಜೈಲಿನೊಳಗೆ ಕುಳಿತು ಇಸ್ಪೀಟ್ ಆಡುತ್ತಾ, ಸಿಗರೇಟ್ ಹಾಗೂ ಮದ್ಯ ಸೇವಿಸುತ್ತಿದ್ದ ಆಕಾಶ್, ರಾಕೇಶ್, ಪ್ರಜ್ವಲ್ ಸೇರಿದಂತೆ ನಾಲ್ವರು ಕೈದಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೈಲು ಅಧೀಕ್ಷಕಿ ಅನೀತಾ ಅವರು ನೀಡಿದ ದೂರಿನಂತೆ ಕ್ರಮ ಕೈಗೊಳ್ಳಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾರಾಗೃಹ ಇಲಾಖೆ, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಹೆಚ್ಚುವರಿ ಮಹಾನಿರೀಕ್ಷಕ (ಐಜಿಪಿ) ಆನಂದ್ ರೆಡ್ಡಿ ಅವರು ಬೆಂಗಳೂರಿನಿಂದ ಕಲಬುರಗಿಗೆ ಆಗಮಿಸಿದ್ದು, ಶುಕ್ರವಾರ ಜೈಲಿನಲ್ಲಿ ತನಿಖೆ ನಡೆಸಿದರು. ಕೈದಿಗಳಿಗೆ ಮೊಬೈಲ್, ಮದ್ಯ ಹಾಗೂ ಸಿಗರೇಟ್ ಸರಬರಾಜು ಮಾಡಿದವರು ಯಾರು? ಈ ಕೃತ್ಯದಲ್ಲಿ ಜೈಲು ಸಿಬ್ಬಂದಿಯ ಶಾಮೀಲಾತಿ ಇದೆಯೇ? ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಜೈಲಿಗೆ ಡಿಜಿಪಿ ಭೇಟಿ:ಜೈಲಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಇಂದು (ಶನಿವಾರ) ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಲಿದ್ದಾರೆ. ಅವರು ಸ್ವತಃ ಸ್ಥಳ ಪರಿಶೀಲನೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಈ ಘಟನೆಯು ರಾಜ್ಯ ಕಾರಾಗೃಹ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದು, ಜೈಲಿನ ಭದ್ರತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.






