ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಆಸ್ಟ್ರೇಲಿಯಾ ಪ್ರವಾಸ
ಜುಲೈ 9 ರಂದು ʻಮೆಲ್ಬೋರ್ನ್ ಕನ್ನಡ ಭವನʼ ಲೋಕಾರ್ಪಣೆ

Views: 0
ಬೆಂಗಳೂರು: ಪ್ರಪಂಚದಾದ್ಯಂತ ಇರುವ ಕನ್ನಡಿಗರನ್ನು ಒಂದುಗೂಡಿಸುವ ಮಹತ್ವದ ಕಾರ್ಯಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿರುವ ಕನ್ನಡಿಗರ ಆಹ್ವಾನ ಮೇರೆಗೆ ಅಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹಾಗೂ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ವಿದೇಶದಲ್ಲಿಯೂ ವಿಸ್ತರಿಸಲು ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಜುಲೈ 6 ರಂದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಮೂಲಕ ಆಸ್ಟ್ರೇಲಿಯಾಕ್ಕೆ ಪ್ರವಾಸ ಬೆಳೆಸಲಿದ್ದಾರೆ. ಜುಲೈ 8 ರಂದು ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿರುವ ಹಾರ್ಥನ್ ರಸ್ತೆಯ ನೋಬಲ್ ಪಾರ್ಕ್ನಲ್ಲಿ ʻಮೆಲ್ಬೋರ್ನ್ ಕನ್ನಡ ಭವನ ವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಜುಲೈ 9 ರಂದು ಮೆಲ್ಬೋರ್ನ್ ವೆಸ್ಟ್ನಲ್ಲಿ ಪ್ರಾರಂಭಿಸಲಾದ ʻವಿಂದಮ್ ಕನ್ನಡ ಬಳಗʼ ವನ್ನು ಉದ್ಘಾಟಿಸಲಿದ್ದಾರೆ. ಮೆಲ್ಬೋರ್ನ್ ವೆಸ್ಟ್ನಲ್ಲಿ ಆರಂಭವಾದ ವಿಂದಮ್ ಕನ್ನಡ ಬಳಗವು ಆ ಭಾಗದಲ್ಲಿ ಇರುವ ಅನಿವಾಸಿ ಕನ್ನಡಿಗರು ಸೇರಿ ಕಟ್ಟಿಕೊಂಡಿರುವ ಕನ್ನಡದ ಸಂಘಟನೆಯಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯದ ಮೂಲಕ ನಾಡು ನುಡಿಯನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ.
ಪ್ರಪಂಚದಾದ್ಯಂತ ನಮ್ಮ ಭಾಷೆ, ಸಂಸ್ಕೃತಿಯ ಮೆರಗನ್ನು ಕಾಪಾಡಿಕೊಳ್ಳುವಲ್ಲಿ ಪರಿಷತ್ತು ಗಣನೀಯ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಮೆಲ್ಬೋರ್ನ್ ವೆಸ್ಟ್ನಲ್ಲಿ ಪ್ರಾರಂಭಿಸಲಾದ ವಿಂದಮ್ ಕನ್ನಡ ಬಳಗವನ್ನು ಪರಿಷತ್ತಿನ ಅಂಗ ಸಂಸ್ಥೆಯನ್ನಾಗಿ ಮಾಡಿಕೊಳ್ಳಲಾಗುವುದು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವಿದೇಶಿ ಕನ್ನಡ ಸಂಘಗಳ ಪ್ರತಿನಿಧಿಯಾಗಿ ರಾಜ್ಯದಲ್ಲಿರಲಿದೆ ಎಂದು ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ 37 ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿರುವ ಮೆಲ್ಬೋರ್ನ್ ಕನ್ನಡ ಸಂಘವು ಕಳೆದ ಅನೇಕ ವರ್ಷಗಳಿಂದ ಕನ್ನಡದ ಕಾಯಕದಲ್ಲಿ ತೊಡಗಿಸಿಕೊಂಡಿದೆ. ಪ್ರಸ್ತುತ ಸ್ವಂತ ಕಟ್ಟಡವನ್ನು ಒಳಗೊಂಡಿದ್ದು ಅದನ್ನು ಕನ್ನಡ ಕೆಲಸಗಳಿಗಾಗಿ ಅನಾವರಣ ಮಾಡಲಾಗುತ್ತಿದೆ. ದೇಶ ವಿದೇಶದಲ್ಲಿ ನೆಲೆ ನಿಂತಿರುವ ಕನ್ನಡಿಗರನ್ನು ಒಂದುಗೂಡಿಸಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರನ್ನಾಗಿಸುವುದರ ಜೊತೆಗೆ ಕನ್ನಡ ಕಾಯಕದಲ್ಲಿ ಅನಿವಾಸಿ ಕನ್ನಡಿಗರಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶ ಕನ್ನಡ ಸಾಹಿತ್ಯ ಪರಿಷತ್ತು ಹೊಂದಿದೆ. ಜೊತೆಗೆ ಆಸ್ಟ್ರೇಲಿಯಾದಲ್ಲಿ ಇರುವ ಮೆಲ್ಬೋರ್ನ್ ಕನ್ನಡ ಸಂಘ, ವಿಂದಮ್ ಕನ್ನಡ ಸಂಘ, ಸಿಡ್ನಿಯಲ್ಲಿರುವ ಕನ್ನಡ ಸಂಘ ಸೇರಿದಂತೆ ಇತರ ಕನ್ನಡ ಸಂಘಗಳನ್ನು ಪರಿಷತ್ತಿನ ಅಂಗ ಸಂಸ್ಥೆಯನ್ನಾಗಿಸುವ ಮೂಲಕ ಅಲ್ಲಿಯ ಎಲ್ಲ ಕನ್ನಡದ ಮನಸ್ಸುಗಳನ್ನು ಒಟ್ಟುಗೂಡಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ರಾಯಭಾರಿಯನ್ನಾಗಿ ಮಾಡಿಕೊಳ್ಳಲಿದೆ. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ಅನಿವಾಸಿ ಕನ್ನಡಿಗರ ಪ್ರತಿನಿಧಿಯಾಗಿ ರಾಜ್ಯದಲ್ಲಿ ಕೆಲಸ ಮಾಡಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.
ಪರಿಷತ್ತಿನ ಅಧ್ಯಕ್ಷರು ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಮೆಲ್ಬೋರ್ನ್, ಸಿಡ್ನಿ, ಪರ್ತ್ ಇತ್ತಿತರ ಕನ್ನಡ ಸಂಘ ಸೇರಿದಂತೆ ಅಲ್ಲಿನ ವಿವಿಧ ಕನ್ನಡ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ಕನ್ನಡದವರೇ ಆಗಿರುವ ನ್ಯೂ ಸೌತ್ ವೇಲ್ಸ್ ಲೆಜಿಸ್ಲೇಟಿವ್ ಅಸೆಂಬ್ಲಿಯ ಲಿವರ್‌ಪೂಲ್ ಕ್ಷೇತ್ರದ ಸದಸ್ಯರಾದ ಚರಿಷ್ಮಾ ಕಲಿಯಂಡ ಅವರೊಂದಿಗೆ, ವಿಂದಮ್ ಕಾರ್ಪೊರೇಟರ್ ಸಹನಾ ರಮೇಶ್, ಸಿಡ್ನಿಯ ಪಾರ್ಲಿಮೆಂಟ್ ಚುನಾವಣೆಯ ಆಕಾಂಕ್ಷಿಯಾಗಿರುವ ಮಂಜುನಾಥ್ ಅವರೊಂದಿಗೆ ಮಾತುಕತೆ ನಡೆಸಿ ಆಸ್ಟ್ರೇಲಿಯಾದಲ್ಲಿ ಇರುವ ಕನ್ನಡ ಶಾಲೆಗಳ ಕುರಿತು ಮಾಹಿತಿ ಪಡೆಯುವದರ ಜೊತೆಗೆ ಕನ್ನಡ ಕಲಿಕೆಯ ಕುರಿತು ಚರ್ಚೆ ನಡೆಸಲಿದ್ದಾರೆ. ಜೊತೆಗೆ ಆಸ್ಟ್ರೇಲಿಯಾದಲ್ಲಿರುವ ಗ್ರಂಥಾಲಯಗಳಲ್ಲಿ ಕನ್ನಡ ಅಧ್ಯಯನ ವಿಭಾಗಕ್ಕೆ ವೀಕ್ಷಣೆ ಮಾಡುವುದರ ಜೊತೆ ಕನ್ನಡ ಭಾಷೆಯನ್ನು ಕಲಿಸುವ ಶಾಲೆಗಳನ್ನು, ಕನ್ನಡ ಭಾಷೆಯ ಸಂಸ್ಕೃತಿ ಉಳಿವಿಗಾಗಿ ಕೆಲಸ ಮಾಡುತ್ತಿರುವ ವಿದೇಶಿ ನೆಲದ ಕನ್ನಡದ ಕಲಾವಿದರನ್ನು ಭೇಟಿಯಾಗಲಿದ್ದಾರೆ. ವಿದೇಶದಲ್ಲಿಯೇ ಇದ್ದು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆಗಳನ್ನು ನೀಡುತ್ತಿರುವ ಯುವ ಸಾಹಿತಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಸಾರ್ವಜನಿಕ ಜಾಲತಾಣಗಳಲ್ಲಿ ಕನ್ನಡವನ್ನು ಸಕ್ರಿಯವಾಗಿ ಬಳಸುವ ಮೂಲಕ ಆ ಭಾಗದಲ್ಲಿ ಇರುವ ಎಲ್ಲ ಕನ್ನಡದ ಮನಸ್ಸುಗಳನ್ನು ಒಟ್ಟುಗೂಡಿಸಿ ಅವರನ್ನು ಪರಿಷತ್ತಿನ ಕಡೆಗೆ ಕರೆದು ತರುವ ಕೆಲಸಮಾಡುವುದರ ಜೊತೆಗೆ ಕನ್ನಡ ಉಳಿಸಿ ಬೆಳೆಸುವಲ್ಲಿ ಅನಿವಾಸಿ ಕನ್ನಡಿಗರ ಕೊಡುಗೆ ಮಹತ್ವವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ತಿಳಿಸಲಿದ್ದಾರೆ ಎಂದು ಪರಿಷತ್ತು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.