ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಇಬ್ಬರು ಯುವತಿಯರ ಜೀವಾಂತ್ಯ; ತನಿಖೆಯಲ್ಲಿ ಬಿಗ್ ಟ್ವಿಸ್ಟ್!
Views: 179
ಕನ್ನಡ ಕರಾವಳಿ ಸುದ್ದಿ: ಇಬ್ಬರು ಯುವತಿಯರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಂಗಳೂರಿನ ಯಲಹಂಕದ ಶಿವನಹಳ್ಳಿಯಲ್ಲಿ ನಡೆದಿದೆ. ನೇಪಾಳ ಮೂಲದ ಸಿರ್ಜನಾ (22) ಮತ್ತು ರೀಟಾ (23) ಮೃತ ಯುವತಿಯರು.
ಇವರು ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇಬ್ಬರೂ ಸಂಬಂಧಿಕರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗುವಂತೆ ಕುಟುಂಬದಿಂದ ಒತ್ತಡವಿತ್ತು. ಆದರೆ, ಇವರಿಬ್ಬರೂ ಸಲಿಂಗಕಾಮಿಗಳಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ವಿಚಾರದಿಂದ ಇಬ್ಬರೂ ಮಾನಸಿಕವಾಗಿ ನೊಂದಿದ್ದರು ಎಂದು ತಿಳಿದುಬಂದಿದೆ. ಇದರ ನಡುವೆ ಇಬ್ಬರೂ ಬೇರೆ ಬೇರೆ ಕಡೆ ವಾಸವಾಗಿದ್ದರಿಂದ ಒಟ್ಟಿಗೆ ಇರಲು ಸಾಧ್ಯವಾಗುತ್ತಿರಲಿಲ್ಲ. ಈ ವಿಚಾರವೂ ಇಬ್ಬರಿಗೂ ಬೇಸರ ಮೂಡಿಸಿತ್ತು ಎನ್ನಲಾಗಿದೆ.
ಘಟನೆಗೂ ಮುನ್ನ ಇಬ್ಬರೂ ಬೆಳಗ್ಗೆ ಮನೆಯಿಂದ ಹೊರಗೆ ಹೋಗಿ ಸಂಜೆ ವಾಪಸ್ ಬರುವುದಾಗಿ ಕುಟುಂಬದವರಿಗೆ ಹೇಳಿದ್ದರು. ಬಳಿಕ ಯಲಹಂಕದ ಶಿವನಹಳ್ಳಿ ಬಳಿಯ ನಿರ್ಜನ ಪ್ರದೇಶಕ್ಕೆ ತೆರಳಿದ್ದರು. ಮರುದಿನ ಬೆಳಿಗ್ಗೆ ಇಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಯಲಹಂಕ ಓಲ್ಡ್ ಟೌನ್ ಪೊಲೀಸರು ಹಾಗೂ ಫಾರೆನ್ಸಿಕ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಆರಂಭದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿರಲಿಲ್ಲ. ಹೀಗಾಗಿ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು. ಆದರೆ, ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.






