ಐಸಿಯುನಲ್ಲಿ ನರ್ಸಿಂಗ್ ಸಿಬ್ಬಂದಿಯಿಂದಲೇ ಮಹಿಳೆಯ ಮೇಲೆ ಅತ್ಯಾಚಾರ

Views: 174
ಕನ್ನಡ ಕರಾವಳಿ ಸುದ್ದಿ: ಇಎಸ್‌ಐಸಿ ವೈದ್ಯಕೀಯ ಕಾಲೇಜಿನ ಸರ್ಜಿಕಲ್ ಮೆಡಿಕಲ್ ಐಸಿಯುನಲ್ಲಿ ನರ್ಸಿಂಗ್ ಸಿಬ್ಬಂದಿ 32 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ರಾಜಸ್ಥಾನದ ಅಲ್ವಾರ್ ನಲ್ಲಿ ನಡೆದಿದೆ.
ಆರೋಪಿ ಸುಭಾಷ್ ಘೀತಾಳಾ ಆಸ್ಪತ್ರೆಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಮತ್ತು ಸಿಬ್ಬಂದಿಗೆ ನೋಟಿಸ್ ನೀಡಲಾಗಿದ್ದು, ಅವರ ಲಿಖಿತ ಪ್ರತಿಕ್ರಿಯೆಗೆ ಸೂಚಿಸಲಾಗಿದೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಲು ಸಮಿತಿ ರಚಿಸಲಾಗಿದ್ದು, ಶನಿವಾರ ಸಂಜೆ ವೇಳೆಗೆ ವರದಿ ಸಲ್ಲಿಸುವ ನಿರೀಕ್ಷೆ ಇದೆ.
ಮಹಿಳೆ ಜೂನ್ 2ರಂದು ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 4ರಂದು ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಐಸಿಯುಗೆ ಸ್ಥಳಾಂತರಿಸಲಾಗಿತ್ತು. ರಾತ್ರಿ 11 ಗಂಟೆಯ ಸುಮಾರಿಗೆ ಹೊರಗೆ ಕಾಯುವಂತೆ ಭದ್ರತಾ ಸಿಬ್ಬಂದಿ ಮಹಿಳೆಯ ಪತಿಗೆ ಸೂಚಿಸಿದ್ದರು. ಮಧ್ಯರಾತ್ರಿ ಬಳಿಕ 1.30 ರಿಂದ 2.30ರ ನಡುವೆ ಪತ್ನಿ ಚುಚ್ಚುಮದ್ದಿನ ಅಡ್ಡ ಪರಿಣಾಮ ಅನುಭವಿಸುತ್ತಿರುವುದಾಗಿ ನರ್ಸಿಂಗ್ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಮಾಹಿತಿ ನೀಡಿ ಒಳಕ್ಕೆ ಬರುವಂತೆ ಸೂಚಿಸಿದ್ದರು. ಪತ್ನಿಯನ್ನು ಮಲಗಿಸಿದ ಬಳಿಕ ಹೊರಹೋಗುವಂತೆ ಪತಿಗೆ ಸೂಚಿಸಲಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.
ಜೂನ್ 5ರಂದು ಪತ್ನಿ ಪ್ರಜ್ಞೆ ಬಂದಿದ್ದು, ಹಿಂದಿನ ರಾತ್ರಿ ನರ್ಸಿಂಗ್ ಸಿಬ್ಬಂದಿ ಲೈಂಗಿಕ ಹಲ್ಲೆ ನಡೆಸಿದ್ದಾಗಿ ಪತಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಎಫ್‌ಐಆರ್ ದಾಖಲಿಸಲಾಗಿದೆ.