ಉಪೇಂದ್ರ ‘ಎ’ ಚಿತ್ರದ ಅನುಭವಗಳನ್ನು ಬಿಚ್ಚಿಟ್ಟ ನಟಿ ಚಾಂದಿನಿ

Views: 115
ಉಪೇಂದ್ರ ‘ಎ’ ಚಿತ್ರದ ಅನುಭವಗಳನ್ನು ಬಿಚ್ಚಿಟ್ಟ ನಟಿ ಚಾಂದಿನಿ
ಉಪೇಂದ್ರ ನಟಿಸಿ ನಿರ್ದೇಶನ ಮಾಡಿದ್ದ 25 ವರ್ಷಗಳ ಹಿಂದಿನ ‘ಎ’ ಚಿತ್ರ ಬಿಡುಗಡೆಗೊಂಡು ಗಾಂಧಿನಗರ ಗಲ್ಲಾ ಪೆಟ್ಟಿಗೆಯನ್ನು ಅಲ್ಲಾಡಿಸಿತ್ತು.
ಇದೀಗ ಮತ್ತೆ ಮರು ಬಿಡುಗಡೆಗೆ ಕಂಡು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಖುಷಿಯಲ್ಲಿ ತಂಡ ಪತ್ರಿಕಾಗೋಷ್ಠಿ ಮೂಲಕ ಸಂತಸವನ್ನು ಹಂಚಿಕೊಂಡಿತು. ಅದರಲ್ಲೂ ಸುಮಾರು ವರ್ಷಗಳಿಂದ ಕಣ್ಮರೆಯಾಗಿದ್ದ `ಎ’ ಸಿನಿಮಾ ನಾಯಕಿ ಚಾಂದಿನಿ ಮಾಧ್ಯಮ ಮಿತ್ರರೊಂದಿಗೆ ಬೆರೆತು ತಮ್ಮ ಅನುಭವಗಳನ್ನು ಹಂಚಿಕೊಂಡರು.

ನಾನು ಎಲ್ಲೇ ಇದ್ದರೂ ಕನ್ನಡದ ಬಗ್ಗೆ ಅಪಾರ ಅಭಿಮಾನ. ಹೊರದೇಶಗಳಲ್ಲಿ ಕನ್ನಡದವರು ಸಿಕ್ಕರೆ ಅವರ ಜೊತೆ ನಾನು ಕನ್ನಡದಲ್ಲಿ ಮಾತನಾಡಲು ಇಚ್ಛೆ ಪಡುತ್ತೇನೆ.`ಎ’ ಚಿತ್ರಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ನಾನು ನ್ಯೂಯಾರ್ಕ್ ಶಾಲೆಯಲ್ಲಿ ಓದುತ್ತಿದ್ದೆ. ಸಿನಿಮಾ ಅಂದರೆ ಗೊತ್ತಿರಲಿಲ್ಲ, ಚಿಕ್ಕ ವಯಸ್ಸು. ಅಲ್ಲಿಂದ ಬಂದಾಗ ತಂಡದವರು ನನ್ನನ್ನು ಚಿಕ್ಕ ಹುಡುಗಿ ಎಂದು ಎಲ್ಲರೂ ನೋಡುತ್ತಿದ್ದರು.
ಗ್ಲಿಸರಿನ್ ಅಂದ್ರೆ ಗೊತ್ತಿರಲಿಲ್ಲ, ಫೋಟೋಶೂಟ್‌ಗೆ ಅಳುವ ಸನ್ನಿವೇಶನಕ್ಕೆ, ನ್ಯಾಚುರಲ್ ಆಗಿ ಅಳುತ್ತಾ ಕ್ಯಾಮೆರಾ ಎದುರಿಸಿದೆ. ಮೇಕಪ್ ಮಾಡಿ ಶೂಟಿಂಗ್‌ಗೆ ರೆಡಿಯಾಗಿದ್ದೆ. ಉಪ್ಪಿ ಬಂದು ಮೇಕಪ್ ಎಲ್ಲ ತೆಗೆಸಿ ನ್ಯಾಚುರಲ್ ಆಗಿರ್ಬೇಕು ಅಂತ ಹೇಳಿಬಿಟ್ಟರು, ಬೆಟ್ಟದ ಮೇಲೆ ನಿಲ್ಲಿಸಿ ಜೀಪನ್ನು ಬಿಟ್ಟಿದ್ರು. ನನಗಂತೂ ತುಂಬಾ ಭಯವಾಗಿತ್ತು, ಮೊದಲನೇ ದೃಶ್ಯವೇ ರೇಪ್ ಸೀನ್, ಸಹ ನಿರ್ದೇಶಕರು ಹಿಂದೆಯಿಂದ ತಳ್ಳಿದ್ದಕ್ಕೆ ಮುಂದೆ ಹೋಗಿ ಬಿದ್ದಿದ್ದೆ. ಹೀಗೆ ಅನೇಕ ಅನುಭವಗಳು ಈ ಚಿತ್ರದಿಂದ ಆಗಿವೆ. ಈ ಸಿನಿಮಾ ನನಗೆ ಒಳ್ಳೆ ಜೀವನ ಕೊಡ್ತು. ಉಪ್ಪಿಯನ್ನು ಎಂದು ಮರೆಯಲು ಸಾಧ್ಯವಿಲ್ಲ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಎರಡು ಪ್ರಮುಖ ವಿಷಯಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡರು. ನಾನು ಮತ್ತೆ ಕನ್ನಡ ಚಿತ್ರಗಳಲ್ಲಿ ಅಭಿನಯಿಸಲು ನಿರ್ಧರಿಸಿದ್ದೇನೆ. ಅದರಲ್ಲೂ ಮೊದಲಿಗೆ ಮತ್ತೆ ಅ ಚಿತ್ರದ ಎರಡನೇ ಭಾಗವನ್ನು ಮಾಡಲು ತಯಾರಿ ಮಾಡಿಕೊಂಡಿದ್ದೇವೆ. ಕಥೆ, ಚಿತ್ರಕಥೆ ಎಲ್ಲವೂ ತಯಾರಿದೆ. ಆದರೆ ಉಪೇಂದ್ರ ಅವರು ಒಪ್ಪಬೇಕು, ಅವರ ಬಳಿ ಹೋಗಿ ಕೇಳುತ್ತೇವೆ, ಒಪ್ಪಿಸಲು ಪ್ರಯತ್ನಿಸುತ್ತೇವೆ ಎಂದರು.
ಮದುವೆ ವಿಚಾರ ಬಂದಾಗ ಸದ್ಯದಲ್ಲಿ ಸಿಹಿ ಸುದ್ದಿ ನೀಡುತ್ತೇನೆ ಎಂದು ಹೇಳಿದರು.ಉಪೇಂದ್ರ ಹೊರದೇಶದ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದರಿಂದ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ನಿರ್ಮಾಪಕರಾದ ಸಿಲ್ಕ್ ಮಂಜು, ಮತ್ತೊಬ್ಬ ನಿರ್ಮಾಪಕ ಜಗನ್ನಾಥ್ ವಸಂತ್, ಸಂಗೀತ ನಿರ್ದೇಶಕ ಗುರುಕಿರಣ್ ಮುಂತಾದ ತಂತ್ರಜ್ಞರು ಭಾಗವಹಿಸಿದ್ದರು.






