ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣದ ತನಿಖೆ ತೀವ್ರ: ಪತ್ನಿ ಸೌಮ್ಯ ಶೆಟ್ಟಿ ದ್ವಿಚಕ್ರ ವಾಹನ ಪೊಲೀಸ್ ವಶಕ್ಕೆ
Views: 76
ಕನ್ನಡ ಕರಾವಳಿ ಸುದ್ದಿ: ಬೆಳ್ತಂಗಡಿಯಲ್ಲಿ ಉದ್ಯಮಿಯಾಗಿದ್ದ ಸುದೀಪ್ ರೈ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯಾದ ಸುದೀಪ್ ರೈ ಅವರ ಪತ್ನಿ ಸೌಮ್ಯ ಶೆಟ್ಟಿ ಬಳಸುತ್ತಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ಈಗ ವಶಕ್ಕೆ ಪಡೆದುಕೊಂಡಿದ್ದಾರೆ.
ಉದ್ಯಮಿ ಸುದೀಪ್ ರೈ ಅವರು ಕಳೆದ ಮಾರ್ಚ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಾವಿಗೆ ಪತ್ನಿ ಸೌಮ್ಯ ಶೆಟ್ಟಿ ಅವರ ಕಿರುಕುಳವೇ ಕಾರಣ ಎಂಬ ಆರೋಪದ ಮೇಲೆ ಕಾರ್ಕಳ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಸೌಮ್ಯ ಶೆಟ್ಟಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಉಡುಪಿ ಜಿಲ್ಲಾ ನ್ಯಾಯಾಲಯ ಇತ್ತೀಚೆಗಷ್ಟೇ ತಿರಸ್ಕರಿಸಿತ್ತು.
ಸ್ಕೂಟರ್ ವಶಕ್ಕೆ ಪಡೆದದ್ದು ಯಾಕೆ?
ಮಾ.17ರಂದು ಸುದೀಪ್ ಕಾರಿನಲ್ಲಿ ತನ್ನ ತಾಯಿಯೊಂದಿಗೆ ಪೂಜಾ ಕಾರ್ಯಕ್ರಮದ ನಿಮಿತ್ತ ಕಡಬ ತಾಲೂಕಿನ ನೆಲ್ಯಾಡಿ ಪೇಟೆಯ ಸಮೀಪ ಹೋಗುತ್ತಿದ್ದಾಗ ಸೌಮ್ಯ ಸ್ಕೂಟಿಯಲ್ಲಿ ಬಂದು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಳು ಎಂದು ದೂರಲಾಗಿತ್ತು.
ನಂತರ ಸುದೀಪ್ ಕಾರ್ಕಳಕ್ಕೆ ಹೋಗಿದ್ದು, ಮಾ.22ರಂದು ಸುದೀಪ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಮಾ.24ರಂದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಸುದೀಪ್‌ಗೆ ಸೌಮ್ಯ ಮಾನಸಿಕ ಚಿತ್ರಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿರುವುದಾಗಿ ಮೃತರ ತಂದೆ ದಾಮೋದರ್ ರೈ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ವೇಳೆ ಸೌಮ್ಯ ಶೆಟ್ಟಿ ಸುದೀಪ್ ಅವರ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದರು ಎನ್ನಲಾಗಿದ್ದು, ಈ ಘಟನೆಗೆ ಸಂಬಂಧಿಸಿದ ಸಾಕ್ಷ್ಯವಾಗಿ ಪೊಲೀಸರು ಈಗ ಆಕೆಯ ಸ್ಕೂಟರ್ ಅನ್ನು ಜಪ್ತಿ ಮಾಡಿದ್ದಾರೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.






