ಜನಮನ

ಉಡುಪಿ ಸೇರಿದಂತೆ ರಾಜ್ಯಾದ್ಯಂತ ಗುಡುಗು, ಮಿಂಚು ಸಹಿತ ಭಾರಿ ಮಳೆ: ಶಿವಮೊಗ್ಗದಲ್ಲಿ ರೈತ ಬಲಿ

Views: 118

ಬೆಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಶುಕ್ರವಾರ ಮಳೆಯಾಗಿದೆ. ಈ ಮಧ್ಯೆ, ಸಿಡಿಲು ಬಡಿದು ಶಿವಮೊಗ್ಗ ತಾಲೂಕಿನ ಹರಮಘಟ್ಟ ಗ್ರಾಮದಲ್ಲಿ ರೈತರೊಬ್ಬರು ಮೃತಪಟ್ಟಿದ್ದಾರೆ. ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಸಿಡಿಲು ಬಡಿದು ರಾಕೇಶ್ ಕೊನೆಯುಸಿರೆಳೆದಿದ್ದಾರೆ

ತುಮಕೂರು ಜಿಲ್ಲೆಯಲ್ಲಿ ಗಾಳಿ, ಮಳೆಯಿಂದ ಅವಾಂತರವನ್ನೇ ಸೃಷ್ಟಿಸಿದೆ. ಕುಣಿಗಲ್ ತಾಲೂಕಿನ ಡಿ. ಹೊಸಹಳ್ಳಿಯಲ್ಲಿ ಗಾಳಿಯ ರಭಸಕ್ಕೆ 30ಕ್ಕೂ ಹೆಚ್ಚು ಮರಗಳು ನೆಲಸಮವಾಗಿವೆ. ಶಾಲಾ ಕಟ್ಟಡದ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಇನ್ನು ರಾಜೇಂದ್ರಪುರ ಗ್ರಾಮದಲ್ಲಿ 3ಮನೆಗಳ ಮೇಲ್ಛಾವಣಿ ಹಾರಿಹೋಗಿವೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ತಡರಾತ್ರಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ಕೊಪ್ಪ ರಸ್ತೆಯ ಇಸಾಕ್ ಎಂಬುವರ ಮನೆಯ ತೆಂಗಿನ ಮರ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಉಡುಪಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

ಉಡುಪಿ ಜಿಲ್ಲೆಯ ಉಡುಪಿ, ಮಣಿಪಾಲ, ಮಲ್ಪೆ, ಪಡುಬಿದ್ರೆ, ಕಾಪು, ಶಿರ್ವ, ಕಾರ್ಕಳ, ಬೈಲೂರು, ಕುಂದಾಪುರ, ಬ್ರಹ್ಮಾವರ, ಬೈಂದೂರು ಮೊದಲಾದ ಭಾಗದಲ್ಲಿ ಶನಿವಾರ ಮುಂಜಾನೆ 4.30ಕ್ಕೆ ಆರಂಭ ಗೊಂಡ ಮಳೆ 2 ಗಂಟೆಗೂ ಅಧಿಕ ಕಾಲ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದೆ.

ಗಾಳಿ ಮಳೆಯಿಂದಾಗಿ ಹಲವೆಡೆ ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ಪರಿಣಾಮ ಬೆಳಗಿನ ಜಾವ ಸ್ಥಗಿತಗೊಂಡಿದ್ದ ವಿದ್ಯುತ್ ಪೂರೈಕೆ  ವ್ಯತ್ಯಯವಾಗಿತ್ತು. ಈಗಾಗಲೇ ನೀರಿನ ಸಂಕಷ್ಟದಲ್ಲಿದ್ದ ಹಲವು ಗ್ರಾಮ, ನಗರ ಭಾಗಕ್ಕೆ ಈ ಮುಂಗಾರು ಪೂರ್ವ ಮಳೆ ನಿಟ್ಟುಸಿರು ಬಿಡುವಂತೆ ಮಾಡಿದೆ.

Related Articles

Back to top button
error: Content is protected !!