ಉಡುಪಿ: ಇಲಿಗಾಗಿ ವಿಷ ಹಾಕಿಟ್ಟಿದ್ದ ಬ್ರೆಡ್ ತಿಂದು ಮಹಿಳೆ ಸಾವು
Views: 110
ಕನ್ನಡ ಕರಾವಳಿ ಸುದ್ದಿ: ಇಲಿಯನ್ನು ಸಾಯಿಸಲೆಂದು ವಿಷ ಹಾಕಿ ಇಟ್ಟ ಬ್ರೆಡ್ ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಉಡುಪಿ ಪುತ್ತೂರು ಗ್ರಾಮದ ನಿವಾಸಿ ಮಂಗಳಗೌರಿ (34) ಮೃತಪಟ್ಟವರು.
ರಾಮ ನಾಯ್ಕ ಅವರ ಪತ್ನಿಯಾದ ಅವರು ಮನೆಯಲ್ಲಿ ತಾಯಿ ಮತ್ತು ಮಗಳೊಂದಿಗೆ ವಾಸವಾಗಿದ್ದರು, ಅವರು ಕೃಷ್ಣ ಮಠದ ಬಳಿ ದರ್ಜಿ ವೃತ್ತಿ ಮಾಡಿಕೊಂಡಿದ್ದರು. ತಾಯಿಯು ಮನೆಯಲ್ಲಿ ಇಲಿಗಾಗಿ ಬ್ರೆಡ್ನಲ್ಲಿ ವಿಷ ಹಾಕಿ ಇಟ್ಟಿದ್ದರು. ನ. 14ರಂದು ಸಂಜೆ 7 ಗಂಟೆಗೆ ಮಂಗಳಗೌರಿ ಕೆಲಸ ಮುಗಿಸಿ ಮನೆಗೆ ಬಂದಿದ್ದು, ಬ್ರೆಡ್ನಲ್ಲಿ ವಿಷ ಸೇರಿಸಿದ್ದ ವಿಷಯ ತಿಳಿಯದೆ ಅದನ್ನು ಸೇವಿಸಿದ್ದರು. ರಾತ್ರಿ ವೇಳೆಗೆ ತೀವ್ರ ಅಸ್ವಸ್ಥರಾದ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು. ಆದರೆ ಹಣಕಾಸಿನ ಕೊರತೆಯಿಂದ ನ. 18ರಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ನ. 20ರಂದು ಬೆಂಗಳೂರಿನ ಅಸ್ಟರ್ ಆಸ್ಪತ್ರೆ ಹಾಗೂ ಅಲ್ಲಿಂದ ಕಡೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನ. 21ರಂದು ಕೊನೆಯುಸಿರೆಳೆದರು. ಈ ಬಗ್ಗೆ ಮೃತರ ಪತಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.






