ಆನ್ಲೈನ್ ಡೇಟಿಂಗ್ ಆ್ಯಪ್: ಹೆಣ್ಣಿನ ಹಿಂದೆ ಹೋದ ಯುವಕನೋರ್ವ ಮಣ್ಣಾಗಿ ಹೋದ ಕಥೆ!

Views: 266
ಹೆಣ್ಣಿನ ಹಿಂದೆ ಹೋದ ಯುವಕನೋರ್ವ ಮಣ್ಣಾಗಿ ಹೋದ ಘಟನೆಯ ಸತ್ಯಾಂಶ ಬಹು ವರ್ಷಗಳ ಬಳಿಕ ಹೊರಬಿದ್ದಿದೆ. ಡೇಟಿಂಗ್ ಆ್ಯಪ್, ಪ್ರೀತಿ, ಪ್ರಣಯ ಎಂದು ಹೋದವನ ಕೊಲೆಗೆ ನಿಜವಾದ ಕಾರಣ ಏನೆಂಬುದು ಬೆಳಕಿಗೆ ಬಂದಿದೆ. 5 ವರ್ಷದ ಹಿಂದೆ ಕೊಂದು ಸೂಟ್ಗೇಸ್ನಲ್ಲಿಟ್ಟು ಬಿಸಾಕಿ ಹೋಗಿದ್ದ ಆರೋಪಿಗಳಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಅಷ್ಟಕ್ಕೂ ಈ ಕೊಲೆಗೆ ಕಾರಣವೇನು ಗೊತ್ತಾ?
ಅಂದಹಾಗೆಯೇ ಇದು 2018ರಲ್ಲಿ ನಡೆದ ಘಟನೆ. ದುಶ್ಯಂತ್ ಎಂಬ ದೆಹಲಿ ಮೂಲದ ವಿವಾಹಿತ ಆನ್ಲೈನ್ ಡೇಟಿಂಗ್ ಆ್ಯಪ್ ಟಿಂಡರ್ ಮೂಲಕ ಪ್ರೀಯಾ ಸೇಠ್ ಎಂಬಾಕೆಯನ್ನು ಪರಿಚಯ ಮಾಡಿಕೊಂಡಿದ್ದ. ಅಚ್ಚರಿಯ ಸಂಗತಿ ಎಂದರೆ ದುಶ್ಯಂತ್ ನಕಲಿ ಖಾತೆ ತೆರೆದು ವಿವಾನ್ ಕೊಹ್ಲಿ ಎಂಬ ಖಾತೆ ಮೂಲಕ ಪ್ರೀಯಾ ಸೇಠ್ ಪರಿಚಯ ಮಾಡಿಕೊಂಡಿದ್ದಲ್ಲದೆ, ತಾನು ಶ್ರೀಮಂತ ಉದ್ಯಮಿ ಎಂದು ಹೇಳಿಕೊಂಡಿದ್ದ.
ಹೀಗೆ ಸುಳ್ಳು ಹೇಳಿ ನಂಬಿಸಿದ್ದ ಪ್ರೀಯಾ ಸೇಠ್ ಬಳಿ ಚಾಟಿಂಗ್, ಡೇಟಿಂಗ್ ನಡೆಸಿದ್ದ ದುಶ್ಯಂತ್ 3 ತಿಂಗಳ ಕಾಲ ಭೇಟಿ ಆಗಲು ಪ್ಲಾನ್ ಮಾಡಿದ್ದ. ಒಂದು ದಿನ ಇಬ್ಬರು ಭೇಟಿ ಮಾಡಲು ನಿರ್ಧಾರ ಮಾಡಿದರು.
ನನ್ನ ರೂಂಗೆ ಬಾ ಎಂದು ಕರೆದ ಪ್ರೀಯಾ ಸೇಠ್
ಕೊನೆಗೆ ಪ್ರೀಯಾ ಸೇಠ್ ಆತನನ್ನು ದೆಹಲಿಯಿಂದ ಜೈಪುರದತ್ತ ಬರಮಾಡಿಕೊಂಡಿದ್ದಳು. ಜೈಪುರಲ್ಲಿ ತನ್ನ ಬಾಡಿಗೆ ರೂಂ ಇದೆ. ಅಲ್ಲಿ ಭೇಟಿಯಾಗೋಣ ಎಂದಿದ್ದರು. ಆದರೆ ಆಕೆಯ ಮಾತಿನಂತೆಯೇ ಅಡ್ರೆಸ್ ಹುಡುಕಿಕೊಂಡಿದ್ದ ದುಶ್ಯಂತ್ಗೆ ಅಲ್ಲಿ ಆಗಿದ್ದೇ ಬೇರೆ.
ಕಿಡ್ನಾಪ್ ಪ್ಲಾನ್ ಮಾಡಿದ್ದ ಖತರ್ನಾಕ್ ಪ್ರೀಯಾ
ದುಶ್ಯಂತ್ ಪ್ರೀಯಾ ಕಳುಹಿಸಿದ ಅಡ್ರೆಸ್ ಹುಡುಕಿಕೊಂಡು ಜೈಪುರದ ರೂಂಗೆ ಬಂದನು. ಆದರೆ ಆತ ಬರುತ್ತಾನೆ ಎಂದು ತಿಳಿದು ಪ್ರೀಯಾ ಅಪಹರಣಕ್ಕೆ ಪ್ಲಾನ್ ಮಾಡಿದ್ದಳು. ಸ್ನೇಹಿತರಾದ ದೀಕ್ಷಾಂತ್ ಮತ್ತು ಲಕ್ಷ್ಯ ವಾಲಿಯಾ ಎಂಬವರನ್ನು ಕರೆಸಿಕೊಂಡಿದ್ದಳು. ಬಳಿಕ ದುಶ್ಯಂತ್ನನ್ನು ಕಿಡ್ನಾಪ್ ಮಾಡಿದ್ದಲ್ಲದೆ, ಆತನನ್ನು ಬೇರೆಡೆ ಕರೆದುಕೊಂಡು ಹೋಗಿದ್ದಾರೆ.
ಮೊದಲೇ ಶ್ರೀಮಂತ ವ್ಯಕ್ತಿ ಎಂದು ಸುಳ್ಳು ಹೇಳಿದ್ದ ದುಶ್ಯಂತ್ನನ್ನು ಕಿಡ್ನಾಪ್ ಮಾಡಿದ್ದಲ್ಲದೆ ಆತನಿಗೆ ಚಿತ್ರಹಿಂಸೆ ನೀಡಿದ್ದರು. ಬಳಿಕ ಆತನ ತಂದೆ ರಾಮೇಶ್ವರ್ ಪ್ರಸಾದ್ ಶರ್ಮಾಗೆ ಕರೆ ಮಾಡಿದ್ದಾರೆ. ಕರೆ ಬಳಿಕ ಆತ ಶ್ರೀಮಂತ ವ್ಯಕ್ತಿ ಅಲ್ಲ ಅನ್ನೋದು ಗೊತ್ತಾಗಿದೆ. ನಂತರ ತಂದೆಯ ಬಳಿ ದುಶ್ಯಂತ್ ನನ್ನನ್ನು ಕೊಲ್ಲುತ್ತಾರೆ, ಬೇಗ 10 ಲಕ್ಷ ಕೊಟ್ಟು ಕರೆದುಕೊಂಡು ಹೋಗಿ ಎಂದು ಕಣ್ಣೀರು ಹಾಕಿದ್ದಾನೆ.
10 ಲಕ್ಷಕ್ಕೆ ಬೇಡಿಕೆ ಇಟ್ಟ ಪಾಪಿಗಳು!
ಇಷ್ಟಾದ ಬಳಿಕ ಪೋನ್ ಕಸಿದ ಪ್ರೀಯಾ ಸೇಠ್ ಸಂಜೆಯೊಳಗೆ 10 ಲಕ್ಷ ಕೊಡಲು ದುಶ್ಯಂತ್ ತಂದೆ ಬಳಿ ಹೇಳಿದ್ದಾಳೆ. ಆದರೆ ರಾಮೇಶ್ವರ್ ಪ್ರಸಾದ್ ನನ್ನ ಬಳಿ ಅಷ್ಟೊಂದು ಹಣವಿಲ್ಲ. 3 ಲಕ್ಷ ಅಡ್ಜೆಸ್ಟ್ ಮಾಡಲು ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.
ಕೊಂದು ಸೂಟ್ಗೇಸ್ನಲ್ಲಿಟ್ಟು ಎಸೆದು ಹೋದರು
ಮಗನ ಅಪಹರಣದಿಂದ ಕಂಗೆಟ್ಟ ತಂದೆ ಸಂಜೆ ಅವರ ಖಾತೆಗೆ ಹಣ ಹಾಕಿದ್ದಾರೆ. ಆದರೆ ಅತ್ತ ದುಷ್ಕರ್ಮಿಗಳು ಆತನಿಗೆ ಸರಿಯಾಗಿ ಬಾರಿಸಿ ಕೊಂದು ಹಾಕಿದ್ದಾರೆ. ನಂತರ ಶವವನ್ನು ಸೂಟ್ಕೇಸ್ನಲ್ಲಿಟ್ಟು ಎಸೆದು ಎಸ್ಕೇಪ್ ಆಗಿದ್ದರು. ಬಳಿಕ ಈ ಕೊಲೆ ಕೇಸ್ ಅನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು.
ಕೊಲೆ ಮಾಡಲು ಕಾರಣ ಬಿಚ್ಚಿಟ್ಟ ಆರೋಪಿಗಳು
ಪ್ರೀಯಾ ತನ್ನ ಸ್ನೇಹಿತರ ಜೊತೆಗೆ ದುಶ್ಯಂತ್ ಕೊಲೆ ಮಾಡಲು ಕಾರಣವನ್ನು ಬಿಚ್ಚಿಟ್ಟಿದ್ದಾಳೆ. ದೀಕ್ಷಾಂತ್ ಜೊತೆ ಲೀವ್ ಇನ್ ಸಂಬಂಧದಲ್ಲಿದ್ದ ಪ್ರೀಯಾ ಆತನಿಗಾಗಿ ಈ ಕೃತ್ಯ ಎಸೆದಳು. ಪ್ರಿಯಕರ 21 ಲಕ್ಷ ಸಾಲ ಮಾಡಿದ್ದು, ಆತನ ಸಾಲ ತೀರಿಸಲು ಅಪಹರಣ ಮತ್ತು ಕೊಲೆ ಮಾಡಿದ್ದರು. ಆದರೀಗ 2018ರಲ್ಲಿ ಮಾಡಿದ ಕೊಲೆಗೆ ಕಾರಣ ಬಿಚ್ಚಿಟ್ಟಿದ್ದಾಳೆ ಪ್ರೀಯಾ ಸೇಠ್. ಸದ್ಯ ಮೂವರು ಅಪರಾಧಿಗಳಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.








