ಶಿಕ್ಷಣ

ಅರ್ಜಿ,ಪ್ರಸ್ತಾವನೆಯನ್ನು ನೀಡದೆ ಬೋಧಕ ಸಂಘದ ಸಾಧಕದ್ವಯರಿಗೆ ರಾಜ್ಯ ಪ್ರಶಸ್ತಿಯ ಗರಿ!

Views: 313

ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾಂವಕರ್ ಬರ್ಗಿಯವರು ಹಾಗೂ ರಾಜ್ಯ ಕೋಶಾಧ್ಯಕ್ಷರಾದ ಶಿವಚಂದ್ರರವರು ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಯಾವುದೇ ಅರ್ಜಿ ಮತ್ತು ಪ್ರಸ್ತಾವನೆಯನ್ನು ನೀಡದೇ ಸಾಧನೆಯನ್ನು ಗುರುತಿಸಿ ನೀಡಲಾಗಿರುವ ಅಪರೂಪದ ಪ್ರಶಸ್ತಿಯು ಇದಾಗಿರುವುದರಿಂದ ವಿಶೇಷವವೆನಿವಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರ ಘಟಕದಿಂದ ಈ ಪ್ರಶಸ್ತಿಯನ್ನು ಶಿಕ್ಷಕ ದಿನಾಚರಣೆಯಂದು ರಾಜಧಾನಿ ಬೆಂಗಳೂರಿನ ಕೀಮ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪ್ರಧಾನ ಮಾಡಲಾಗುತ್ತಿದೆ ಎಂದು ಅಧ್ಯಕ್ಷರಾದ ಬಸವರಾಜ ಗುರಿಕಾರರವರು ತಿಳಿಸಿದ್ದಾರೆ.

ಮಂಜುನಾಥ ಗಾಂವಕರ್ ಬರ್ಗಿಯವರು ತಮ್ಮ ಸ್ವಂತ ಊರಾದ ಕುಮಟಾ ತಾಲ್ಲೂಕಿನ ಬರ್ಗಿಯಲ್ಲಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ 22ನೆಯ ವಯಸ್ಸಿಗೆ ಪ್ರೌಢಶಾಲಾ ಶಿಕ್ಷಕರಾಗಿ ನೇಮಕಗೊಂಡ ಇವರು ಈಗಾಗಲೇ 22 ವರ್ಷಗಳ ಸುದೀರ್ಘಾವಧಿಯ ಸೇವೆಯನ್ನು ಸಲ್ಲಿಸಿರುತ್ತಾರೆ. ಶಿಕ್ಷಣ,ಇತಿಹಾಸ, ಕನ್ನಡ, ಸಂಸ್ಕೃತ ಹಾಗೂ ಪತ್ರಿಕೋದ್ಯಮ ವಿಷಯಗಳನ್ನೊಳಗೊಂಡ ಒಟ್ಟು ಐದು ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು ಪದವಿಗಳ ಸರದಾರರೆನಿಸಿ ಯಕ್ಷಗಾನದಲ್ಲಿ ಸಂಸ್ಕೃತ ಸಾಹಿತ್ಯ ಎಂಬ ವಿಷಯದ ಕುರಿತು ಪಿಎಚ್ ಡಿ ವ್ಯಾಸಂಗದಲ್ಲಿ ತೊಡಗಿದ್ದಾರೆ . ಪ್ರಖರ ವಾಗ್ಮಿಯಾಗಿ, ಪ್ರಬುದ್ಧ ಬರಹಗಾರರಾಗಿ ಅಪ್ರತಿಮ ಚಿಂತಕರಾಗಿ, ಕವಿಯಾಗಿ, ಶ್ರೇಷ್ಠ ಯಕ್ಷನಟರಾಗಿ, ಉತ್ತಮ ಸಂಘಟಕರಾಗಿ, ಅಪರೂಪದ ಅಧ್ಯಾಪಕರಾಗಿ ನಾಡಿನ ಗಮನವನ್ನು ಸೆಳೆದಿದ್ದಾರೆ. ಸೇವಾ ಕಾನೂನು ಚಿಂತಕರಾಗಿಯೂ ಸೂಪರಿಚಿತರೆನಿಸಿದ್ದಾರೆ. ಈಗಾಗಲೇ ಅವರ ವೈವಿಧ್ಯಮಯವಾದ ಹದಿನಾರು ಕೃತಿಗಳು ಬೆಳಕುಗೊಂಡಿವೆ. ಅವರ ಹಲವಾರು ಬಿಡಿ ಲೇಖನಗಳು ಓದುಗರ ಮೆಚ್ಚುಗೆಗೆ ಪಾತ್ರವಾಗಿವೆ. ರಚನಾತ್ಮಕ ಸಂಘಟನೆಗಳೊಂದಿಗೆ ಸಕ್ರಿಯರಾಗಿರುವ ಅವರು ಸೃಜನಶೀಲ ಪ್ರಯೋಗಗಳಿಂದ ಅಸಂಖ್ಯ ಅಭಿಮಾನಿಗಳನ್ನು ಹೊಂದಿದ್ದಾರೆ.

ಮಂಜುನಾಥ ಬರ್ಗಿಯವರ ಗರಡಿಯಲ್ಲಿ ಶೈಕ್ಷಣಿಕವಾಗಿ ಮತ್ತು ಆಡಳಿತಾತ್ಮಕವಾಗಿ ಪಳಗುತ್ತಿರುವ ಶಿವಚಂದ್ರರವರು ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಕುಮಟಾದ ಲುಕ್ಕೇರಿ ಮಾಸೂರಿನಲ್ಲಿಯ ಬಬ್ರುಲಿಂಗೇಶ್ವರ ವಿದ್ಯಾಲಯದಲ್ಲಿ ಮುಖ್ಯಾಧ್ಯಾಪಕರಾಗಿದ್ದಾರೆ. ಹಿಂದಿ ಮತ್ತು ಪತ್ರಿಕೋದ್ಯಮ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಇವರು ಹಲವಾರು ಸಂಘಟನೆಗಳೊಂದಿಗಿದ್ದು, ತಮ್ಮ ಸಜ್ಜನಿಕೆಯ ನಡೆ-ನುಡಿಗಳಿಂದ ಸಾರ್ವಜನಿಕವಾಗಿ ಆದರಕ್ಕೆ ಪಾತ್ರರಾಗಿದ್ದಾರೆ.

ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಬರ್ಗಿ ಹಾಗೂ ಶಿವಚಂದ್ರರವರನ್ನು ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯ ಸಂಚಾಲಕರಾದ ವಿಜಯಕುಮಾರ್ ನಾಯ್ಕರವರು ಅಭಿನಂದಿಸಿದ್ದಾರೆ.

Related Articles

Back to top button
error: Content is protected !!