ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ದೌರ್ಜನ್ಯ ಎಸಗಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಬಿಜೆಪಿ ನಾಯಕನ ಪುತ್ರನ ಬಂಧನ
Views: 144
ಕನ್ನಡ ಕರಾವಳಿ ಸುದ್ದಿ: 25 ರಿಂದ 30 ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಗೋವಾ ಪೊಲೀಸರು ಬಿಜೆಪಿ ನಾಯಕನೊಬ್ಬನ ಮಗನನ್ನು ಬಂಧಿಸಿದ್ದಾರೆ. ಈ ಘಟನೆ ಗೋವಾ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬಂಧಿತ ಆರೋಪಿಯನ್ನು ಮಡೆಗಲ್ ಕಾಕೋರಾ ನಿವಾಸಿ, ಕರ್ಚೋರೆಮ್ ಪುರಸಭೆಯ ಬಿಜೆಪಿ ಕೌನ್ಸಿಲರ್ ಪುತ್ರ ಸೋಹಮ್ ಸುಶಾಂತ್ ನಾಯಕ್ (20) ಎಂದು ಗುರುತಿಸಲಾಗಿದೆ. ಈತ ಕಳೆದ ಮೂರು ವರ್ಷಗಳಿಂದ ಸರಣಿ ದೌರ್ಜನ್ಯ ಎಸಗುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಪಾರ್ಟಿಯೊಂದರಲ್ಲಿ ಆರೋಪಿ ಸೋಹಮ್, ತನ್ನ ಸ್ನೇಹಿತರ ಮುಂದೆ ಬಾಲಕಿಯರ ಮೇಲಿನ ದೌರ್ಜನ್ಯದ ಬಗ್ಗೆ ತಾನು ಚಿತ್ರೀಕರಿಸಿದ್ದ ವಿಡಿಯೋಗಳನ್ನು ಸ್ನೇಹಿತರಿಗೆ ತೋರಿಸಿದ್ದಾನೆ. ಈ ವಿಷಯ ಹೊರಬರುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಭಾರಿ ಪ್ರತಿಭಟನೆಗಳು ನಡೆದವು.
ಪೊಲೀಸ್ ತನಿಖೆಯ ಪ್ರಕಾರ, ಈತ ಅಪ್ರಾಪ್ತ ಬಾಲಕಿಯರನ್ನು ತನ್ನ ಬಲೆಗೆ ಬೀಳಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಅಷ್ಟೇ ಅಲ್ಲದೆ, ಆ ಕೃತ್ಯಗಳನ್ನು ವಿಡಿಯೋ ಮಾಡಿಕೊಂಡು, ಬಳಿಕ ಅದೇ ವಿಡಿಯೋಗಳನ್ನು ತೋರಿಸಿ ಬಾಲಕಿಯರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.
ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿ ಭಾನುವಾರ ಬೃಹತ್ ಪ್ರತಿಭಟನೆ ನಡೆದಿತ್ತು. 48 ಗಂಟೆಗಳ ಒಳಗೆ ಬಂಧಿಸದಿದ್ದರೆ ರಾಜ್ಯಾದ್ಯಂತ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.






