ಹಿಂದೂ ಧರ್ಮಕ್ಕೆ ಅಪಮಾನ: ಮಂಗಳೂರಲ್ಲಿ ರೊಚ್ಚಿಗೆದ್ದ ಹೋರಾಟಕ್ಕೆ ಶಿಕ್ಷಕಿ ತಲೆದಂಡ

Views: 194
ಮಂಗಳೂರು: ಹಿಂದು ಧರ್ಮದ ಬಗ್ಗೆ ಅವಹೇಳನ ಮಾಡಿದ್ದಾರೆಂದು ಆರೋಪಕ್ಕೀಡಾದ ಶಿಕ್ಷಕಿಯ ವಿರುದ್ಧ ಮಂಗಳೂರಿನಲ್ಲಿ ಆಕ್ರೋಶದ ಕಿಚ್ಚು ಭುಗಿಲೆದ್ದಿದೆ. ಶಿಕ್ಷಕಿಯನ್ನು ವಜಾಗೊಳಿಸುವಂತೆ ಆಗ್ರಹಿಸಿ ಶಾಸಕರೇ ಧರಣಿ ಕುಳಿತಿದ್ದರು. ಸದ್ಯ ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದ್ದಂತೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾರನ್ನು ಆಡಳಿತ ಮಂಡಳಿ ಅಮಾನತು ಮಾಡಿದೆ.
ಜೆರೋಸಾ ಶಾಲೆಯ ಏಳನೇ ತರಗತಿ ಶಿಕ್ಷಕಿ ಸಿಸ್ಟರ್ ಪ್ರಭಾ, ಫೆ.8 ರಂದು ‘Work is worship’ ಎಂಬ ವಿಷಯ ಬಗ್ಗೆ ಪಾಠ ಮಾಡ್ತಿದ್ರು. ಈ ವೇಳೆ ರಾಮಮಂದಿರ, ಪ್ರಭು ಶ್ರೀರಾಮನ ಬಗ್ಗೆ ಅವಹೇಳನ ಮಾಡಿದ ಆರೋಪ. ಈ ಬಗ್ಗೆ ತಮ್ಮ ಪೋಷಕರ ಬಳಿ ವಿದ್ಯಾರ್ಥಿಗಳು ಹೇಳಿಕೊಂಡಿದ್ದರು. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಬೋಧನೆ ಮಾಡಿದ ಆರೋಪ ಸಂಬಂಧ ಪೋಷಕರು ಶಾಲೆಗೆ ಆಗಮಿಸಿ ಆಡಳಿತ ಮಂಡಳಿ ಗಮನಕ್ಕೂ ತಂದಿದ್ದು, ಶಿಕ್ಷಕಿ ಸಿಸ್ಟರ್ ಪ್ರಭಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಕ್ರಮಕ್ಕೆ ಒತ್ತಾಯಿಸಲಾಗಿದೆ.
ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಪೋಷಕರು ಮತ್ತು ಹಿಂದೂ ಸಂಘಟನೆಗಳು ಶಾಲೆ ಬಳಿಕ ಆಗಮಿಸಿ, ಪ್ರತಿಭಟನೆ ನಡೆಸಿದ್ರು. ಮುಂಜಾಗ್ರತಾ ಕ್ರಮವಾಗಿ ಶಾಲೆ ಬಳಿ ಬಿಗಿ ಭದ್ರತೆ ನಿಯೋಜಿಸಲಾಗಿತ್ತು ಶಾಸಕರು ಜೆರೋಸಾ ಶಾಲೆಯ ವಿರುದ್ಧ ಮತ್ತಷ್ಟು ಪ್ರತಿಭಟನೆ ಮಾಡೋದಾಗಿ ಎಚ್ಚರಿಕೆ ನೀಡಿದ್ರು.
ರಾಜಕೀಯ ತಿರುವು ಪಡೆದುಕೊಂಡು ಆಕ್ರೋಶದ ಕಿಚ್ಚು ಹೆಚ್ಚಾದ ಬೆನ್ನಲೇ ಸಂತ ಜೆರೊಸಾ ಶಾಲಾ ಆಡಳಿತ ಮಂಡಳಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮುಂದಾಯ್ತು. ಹಿಂದೂ ಧರ್ಮಕ್ಕೆ ಅವಹೇಳನ ಮಾಡಿದ ಏಳನೇ ತರಗತಿ ಶಿಕ್ಷಕಿ ಸಿಸ್ಟರ್ ಪ್ರಭಾರನ್ನು ಅಮಾನತು ಮಾಡಿರೋದಾಗಿ ಶಾಲಾ ಆಡಳಿತ ಮಂಡಳಿ ಪೋಷಕರಿಗೆ ತಿಳಿಸಿದರು. ಲಿಖಿತ ರೂಪದಲ್ಲಿ ಅಮಾನತು ಆದೇಶ ಹೊರಡಿಸಲಾಗಿದೆಯಾದರೂ ಆಡಳಿತ ಮಂಡಳಿ ತಪ್ಪು ಒಪ್ಪಿಕೊಂಡಿಲ್ಲ. ಹೀಗಾಗಿ ಮುಖ್ಯಶಿಕ್ಷಕಿ ಮತ್ತು ಶಾಲಾ ಆಡಳಿತಕ್ಕೆ ಶಾಸಕರು ಹಿಗ್ಗಾಮುಗ್ಗಾವಾಗಿ ತರಾಟೆಗೆ ತೆಗೆದುಕೊಂಡರು. ಸಂಜೆ ವೇಳೆಗೆ ಶಾಲೆಯಿಂದ ಹೊರಬಂದ ವಿದ್ಯಾರ್ಥಿಗಳು ಕೂಡ ಪೋಷಕರ ಪ್ರತಿಭಟನೆಗೆ ಸಾಥ್ ನೀಡಿದ್ರು. ಹಾಗೂ ಜೈ ಶ್ರೀರಾಮ್ ಘೋಷಣೆ ಕೂಗಿದ್ರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸ್ ಕಮಿಷನರ್ ಮತ್ತು ಜಿಲ್ಲಾಧಿಕಾರಿ ಪೋಷಕರನ್ನು ಮತ್ತು ಶಾಸಕರನ್ನು ಮನವೊಲಿಸಿ, ಸ್ಥಳದಿಂದ ತೆರಳುವಂತೆ ಮನವಿ ಮಾಡಿದ್ರು. ಹಾಗೂ ಶಾಲೆಯ ಆಡಳಿತ ಮಂಡಳಿ ಸದಸ್ಯರ ಜೊತೆಗೆ ಮಾತುಕತೆ ನಡೆಸಿ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.