ಇತರೆ

ಸ್ಟಾರ್ ಹೋಟೆಲ್​ನ ಕೊಠಡಿಯಲ್ಲಿ ವಿದೇಶಿ ಮಹಿಳೆ ಶವ ಪತ್ತೆ: ಉಸಿರುಗಟ್ಟಿ ಹತ್ಯೆ ಮಾಡಿದ  ಇಬ್ಬರು ಹೋಟೆಲ್ ಸಿಬ್ಬಂದಿ ವಶಕ್ಕೆ 

Views: 111

ವಿದೇಶಿ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜರೀನಾ ಮೃತ ಮಹಿಳೆ. ಈಕೆ ಮೂಲತಃ ಉಜ್ಬೇಕಿಸ್ತಾನದವರು. ಬಿಡಿಎ ಸೇತುವೆ ಬಳಿಯ ಖಾಸಗಿ ಸ್ಟಾರ್ ಹೋಟೆಲ್​ನ ಕೊಠಡಿಯಲ್ಲಿ ಅವರು ಮೃತಪಟ್ಟಿದ್ದರು.

ಮಹಿಳೆ ಬಳಿಯಿದ್ದ ವಿದೇಶಿ ಹಣ ಮತ್ತು ಮೊಬೈಲ್​ಗಾಗಿ ಹೋಟೆಲ್​ನಲ್ಲಿ‌ ಹೌಸ್ ಕೀಪಿಂಗ್​ ಆಗಿ ಕೆಲಸ ಮಾಡುತ್ತಿದ್ದ ಆರೋಪಿಗಳಿಬ್ಬರು ರೂಮ್ ಸರ್ವಿಸ್​ಗೆ ಹೋಗಿದ್ದಾಗ ಮಹಿಳೆಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ.

ಬಳಿಕ, ಆಕೆ ಬಳಿಯಿದ್ದ ಹಣ ಮತ್ತು ಮೊಬೈಲ್​ ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಇಬ್ಬರು ಆರೋಪಿಗಳು ಅಸ್ಸಾಂ ಮೂಲದವರು ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳಿಂದ ಪೊಲೀಸರು ₹13,000 ಸಾವಿರ ನಗದು, ₹2,000 ಮುಖಬೆಲೆಯ ಉಜ್ಬೇಕಿಸ್ಥಾನದ ಎರಡು ನೋಟುಗಳು ₹5,000 ಮುಖ‌ಬೆಲೆಯ ಒಂದು ನೋಟನ್ನು ಸೀಜ್ ಮಾಡಿದ್ದಾರೆ.

ಏನಿದು ಪ್ರಕರಣ?

ವಿದೇಶಿ ಮಹಿಳೆ ಜರೀನಾ ಕಳೆದ ನಾಲ್ಕು ದಿನದ ಹಿಂದೆ ಉಜ್ಬೇಕಿಸ್ತಾನದಿಂದ ಪ್ರವಾಸಿ ವೀಸಾದಡಿ ಬೆಂಗಳೂರಿಗೆ ಬಂದಿದ್ದರು. ಕಳೆದ ಆರು ದಿನಗಳಿಂದ ಶೇಷಾದ್ರಿಪುರಂ ಬಳಿಯಿರುವ ಜಗದೀಶ್ ಹೋಟೆಲ್​ನಲ್ಲಿ ತಂಗಿದ್ದರು. ಮಾರ್ಚ್‌ 13ರಂದು ಸಾಯಂಕಾಲ ಹೋಟೆಲ್ ಸಿಬ್ಬಂದಿ ಎಷ್ಟೇ ಕೂಗಿದರೂ ಮಹಿಳೆ ಬಾಗಿಲು ತೆರೆದಿಲ್ಲ. ಹೀಗಾಗಿ, ಮಾರ್ಚ್‌ 13ರ ಮಧ್ಯರಾತ್ರಿ ಮಾಸ್ಟರ್ ಕೀ ಬಳಸಿ ಹೋಟೆಲ್ ಸಿಬ್ಬಂದಿ ಕೊಠಡಿಯ ಬಾಗಿಲು ತೆಗೆದಾಗ ಮಹಿಳೆಯ ಶವ ಪತ್ತೆಯಾಗಿದೆ.

ಕೊಲೆಯಾಗಿರುವ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಶೇಷಾದ್ರಿಪುರಂ ಪೊಲೀಸರು, ಎಫ್​ಎಸ್​ಎಲ್ ತಂಡ ಹಾಗೂ ಡಾಗ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕೇಂದ್ರ ವಿಭಾಗ ಡಿಸಿಪಿ ಶೇಖರ್ ಟೆಕ್ಕಣ್ಣನವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಹೋಟೆಲ್ ಸಿಸಿಟಿವಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದರು.

 

 

Related Articles

Back to top button