ಸಾಲಿಗ್ರಾಮ ಪ್ರಾಣಿ,ಪಕ್ಷಿ ಪಾಲನಾ ಕೇಂದ್ರ ತೆರವಿಗೆ ಮಾನವ ಹಕ್ಕು ಪ್ರತಿಷ್ಠಾನ ಆಕ್ಷೇಪ

Views: 249
ಕನ್ನಡ ಕರಾವಳಿ ಸುದ್ದಿ: ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಪಕ್ಕದಲ್ಲಿರುವ ಪ್ರಾಣಿ, ಪಕ್ಷಿಗಳ ಪಾಲನೆ ಕೇಂದ್ರವನ್ನು ತೆರವು ಮಾಡಬೇಕು ಎಂದು ಆಗಮಿಸಿದ ಅಧಿಕಾರಿಗಳಿಗೆ ರಾಜ್ಯ ಮಾನವ ಹಕ್ಕು ಪ್ರತಿಷ್ಠಾನ ಹಾಗೂ ಸ್ಥಳೀಯರಿಂದ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಪ್ರಾಣಿ ಪಾಲನಾ ಕೇಂದ್ರದಲ್ಲಿ ಪ್ರಾಣಿ, ಪಕ್ಷಿಗಳನ್ನು ಕಾನೂನಾತ್ಮಕವಾಗಿ ಪಾಲನೆ ಮಾಡುತ್ತಿಲ್ಲ ಎಂದು ಸ್ವಯಂ ಸೇವಾ ಸಂಘಟನೆಯೊಂದು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಇಲ್ಲಿನ ಪ್ರಾಣಿ, ಪಕ್ಷಿಗಳ ಸ್ಥಿತಿಗತಿ ಬಗ್ಗೆ ವರದಿ ನೀಡಬೇಕು, ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಪಶುಪಾಲನೆ ಇಲಾಖೆಗೆ ಆದೇಶಿಸಿತ್ತು. ಅದರಂತೆ ಅಧಿಕಾರಿಗಳು ವರದಿ ಸಿದ್ಧಪಡಿಸಿ, ನೋಟಿಸ್ ನೀಡಲು ಬಂದಿದ್ದರು.
ಗಾಯಗೊಂಡ, ಅಪಘಾತ ಮುಂತಾದ ಸಮಸ್ಯೆಗೆ ಸಿಕ್ಕಿ ನರಳುತ್ತಿರುವ ನಾಯಿ, ಹಾವು,ಪಕ್ಷಿ ಮೊದಲಾದವುಗಳನ್ನು ಮನೆಗೆ ತಂದು ಪಾಲನೆ ಕೇಂದ್ರದ ಸುಧೀಂದ್ರ ಐತಾಳರು ಆರೈಕೆ ಮಾಡುತ್ತಾರೆ. ಆಡಳಿತಾಧಿಕಾರಿಗಳು ಅವರಿಗೆ ಕಿರುಕುಳ ನೀಡದೆ ಅವರ ಕಾರ್ಯಕ್ಕೆ ಕಾನೂನು ರೀತಿಯಲ್ಲಿ ಸಹಕಾರ ನೀಡಬೇಕು ಎಂದು ರಾಜ್ಯ ಮಾನವ ಹಕ್ಕು ಪ್ರತಿಷ್ಠಾನದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ ಮೊದಲಾದವರು ಅಧಿಕಾರಿಗಳೊಂದಿಗೆ ವಾದಿಸಿದರು.ವಾದ ವಿವಾದಗಳು ನಡೆದ ನಂತರ ಅಧಿಕಾರಿಗಳು ಮನೆಯ ಗೋಡೆಗೆ ನೋಟಿಸ್ ಅಂಟಿಸಿದರು. ಘಟನೆ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡುವುದಾಗಿ ತಿಳಿಸಿ ಅಲ್ಲಿಂದ ತೆರಳಿದ್ದಾರೆ.
ಪಶುಪಾಲನೆ ಇಲಾಖೆಯ ಉಡುಪಿ ಉಪನಿರ್ದೇಶಕ ಡಾ.ಎಂ.ಸಿ. ರೆಡ್ಡಿಪ್ಪ, ಮುಖ್ಯ ಪಶುವೈದ್ಯಾಧಿಕಾರಿ ಡಾ| ಉದಯ ಕುಮಾರ್, ಮುಖ್ಯ ಪಶುವೈದ್ಯ ಡಾ| ಪ್ರದೀಪ್, ಡಾ| ಸೂರಜ್, ಅಜೇಯ್ ಹಾಗೂ ಸಾಲಿಗ್ರಾಮ ಪ.ಪಂ. ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್ ಮತ್ತು ಸಿಬಂದಿ, ಕೋಟ ಠಾಣೆಯ ಕ್ರೈಂ ವಿಭಾಗದ ಪಿ.ಎಸ್.ಐ. ಸುಧಾ ಪ್ರಭು ಇನ್ನಿತರರು ಇದ್ದರು.