ಶ್ರೀರಾಮ ಪೂಜೆಗೆ ತೆರಳಿದ ಸಂಸದ ಪ್ರತಾಪ್ ಸಿಂಹಗೆ ಸ್ಥಳೀಯರಿಂದ ಘೇರಾವ್

Views: 133
ಅಯೋಧ್ಯೆ ರಾಮನ ವಿಗ್ರಹ ಕೆತ್ತನೆಗೆ ಕಪ್ಪು ಶಿಲೆ ಸಿಕ್ಕ ಸ್ಥಳದಲ್ಲಿ ಪೂಜೆಗೆ ಆಗಮಿಸಿದ ಸಂಸದ ಪ್ರತಾಪ್ ಸಿಂಹ ಅವರಿಗೆ ಸ್ಥಳೀಯ ಗ್ರಾಮಸ್ಥರು ಮತ್ತು ದಲಿತ ಸಂಘಟನೆ ಮುಖಂಡರು ಘೇರಾವ್ ಹಾಕಿದ ಘಟನೆ ನಡೆದಿದೆ.
ಮೈಸೂರಿನ ಶಿಲ್ಪಿ ಕೆತ್ತನೆ ಮಾಡಿರುವ, ಉತ್ತರ ಪ್ರದೇಶದ ಆಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾ ಮೂರ್ತಿಯ ಕಪ್ಪು ಶಿಲೆ ಕಲ್ಲು ಹಾರೋಹಳ್ಳಿ ಬಳಿಯ ಗಯಜ್ಜೇಗೌಡನಪುರದ ದಲಿತ ಸಮುದಾಯದ ರಾಮದಾಸ್ ಅವರ ಜಮೀನಿನಲ್ಲಿ ಸಿಕ್ಕಿತ್ತು. ಈ ವಿಚಾರ ಬೆಳಕಿಗೆ ಬಂದ ನಂತರ, ‘ಇಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗುವುದು’ ಎಂದು ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಭೂಮಿಪೂಜೆ ನಿಗದಿಪಡಿಸಲಾಗಿತ್ತು.
ಪೂಜಾ ಸ್ಥಳಕ್ಕೆ ಸಂಸದ ಪ್ರತಾಪ್ ಸಿಂಹ ಆಗಮಿಸುತ್ತಿದ್ದಂತೆ ಸ್ಥಳೀಯ ಗ್ರಾಮಸ್ಥರು ಮತ್ತು ದಲಿತ ಸಂಘಟನೆಗಳ ಮುಖಂಡರು ಜಮೀನಿಗೆ ಪ್ರವೇಶ ನೀಡದೆ ಘೇರಾವ್ ಹಾಕಿದರು. ‘ಗೋ ಬ್ಯಾಕ್ ಪ್ರತಾಪ್ ಸಿಂಹ’, ‘ದಲಿತ ವಿರೋಧಿ ಪ್ರತಾಪ್ ಸಿಂಹನಿಗೆ ಧಿಕ್ಕಾರ’.. ಇತ್ಯಾದಿ ಘೋಷಣೆಗಳನ್ನು ಕೂಗಿದರು.
ಇದರಿಂದ ಮುಜುಗರಕ್ಕೆ ಒಳಗಾದ ಪ್ರತಾಪ್ ಸಿಂಹ, ಜನರಿಗೆ ಸಮಜಾಯಿಷಿ ನೀಡಲು ಮುಂದಾದರು. ಆದರೆ, ಗ್ರಾಮಸ್ಥರು ಮಾತ್ರ ಅವರ ಮಾತುಕೇಳಲು ಸಿದ್ಧವಿರಲಿಲ್ಲ. ‘ಇಲ್ಲಿಗೆ ನೀವು ಬರುವುದು ಬೇಡ, ಇಲ್ಲಿಂದ ಜಾಗ ಖಾಲಿ ಮಾಡಿ’ ಎಂದರು.
‘ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನಾನು ದಲಿತ ವಿರೋಧಿಯಲ್ಲ’ ಎಂದ ಸಂಸದ ಪ್ರತಾಪ್ ಸಿಂಹ, ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನ ಮಾಡಿದರು. ಆದರೆ, ಸಂಸದರ ಯಾವ ಮಾತಿಗೂ ಸಮಾಧಾನಗೊಳ್ಳದ ಗ್ರಾಮಸ್ಥರು ಇಲ್ಲಿಂದ ವಾಪಸ್ ಹೋಗಿ’ ಎಂದರು.
ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಸಚಿವ ಸಾ.ರಾ.ಮಹೇಶ್ ಗ್ರಾಮಸ್ಥರ ಮನವೊಲಿಸಲು ಪ್ರಯತ್ನ ನಡೆಸಿದರು. ಗ್ರಾಮಸ್ಥರು ಮಾತು ಕೇಳಿದಿದ್ದಾಗ, ಸಂಸದ ಪ್ರತಾಪ್ ಸಿಂಹ ಅವರನ್ನೇ ಅಲ್ಲಿಂದ ವಾಪಸ್ ಹೋಗುವಂತೆ ಶಾಸಕರು ಮನವಿ ಮಾಡಿದರು. ಇದರಿಂದ ಬೇಸರಗೊಂಡ ಸಂಸದ ಪ್ರತಾಪ್ ಸಿಂಹ ಅಲ್ಲಿಂದ ಹೊರಟರು. ಆ ಬಳಿಕ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು.