ವಿಷಪ್ರಾಶನದಿಂದ ಅಸುನೀಗಿದ ಐದು ಹುಲಿಗಳ ಅಂತ್ಯಕ್ರಿಯೆ

Views: 224
ಕನ್ನಡ ಕರಾವಳಿ ಸುದ್ದಿ: ವಿಷಪ್ರಾಶನದಿಂದ ಅಸುನೀಗಿದ ಹುಲಿಗಳ ದೇಹವನ್ನು ಅಂತ್ಯಕ್ರಿಯೆ ನಡೆಸಲಾಯಿತು.
ಚಾಮರಾಜನಗರದ ಹನೂರು ತಾಲೂಕಿನ ಮೀಣ್ಯಂನಲ್ಲಿ 5 ಹುಲಿಗಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ನಡೆಸಿ ಹುಲಿ ಮತ್ತು ಹಸುವಿನ ಅಂಗಾಂಗಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಿ, ಕಳೇಬರವನ್ನು ಅಂತ್ಯಕ್ರಿಯೆ ನಡೆಸಲಾಯಿತು.
ಹುಲಿಗಳ ಮೃತದೇಹದ ಆಸುಪಾಸಿನಲ್ಲೇ ಸಿಕ್ಕಿದ್ದ ಹಸುವಿನ ದೇಹವನ್ನು ಪ್ರತ್ಯೇಕವಾಗಿ ಸುಡಲಾಗಿದೆ.ಮರಣೋತ್ತರ ಪರೀಕ್ಷೆಯಲ್ಲಿ ವಿಷಯ ಸತ್ಯ ಬಯಲು ಮೃತಪಟ್ಟಿದ್ದ 5 ಹುಲಿಗಳಲ್ಲಿ ತಾಯಿ ಹುಲಿ ಸೇರಿದಂತೆ ನಾಲ್ಕು ಹೆಣ್ಣು ಹುಲಿ, ಒಂದು ಗಂಡು ಹುಲಿಗಳಾಗಿದ್ದು, ತಾಯಿ ಹುಲಿಗೆ 8 ವರ್ಷ ಮತ್ತು ಮರಿಗಳಿಗೆ 8-10 ತಿಂಗಳು ಎಂದು ಅರಣ್ಯ ಇಲಾಖೆ ಅಂದಾಜು ಮಾಡಿದೆ.
ಹುಲಿಗಳು ಮೃತಪಟ್ಟು 3 ದಿನಗಳಾಗಿದ್ದು, ಹಸುವಿನ ಮೃತದೇಹಕ್ಕೆ ಕ್ರಿಮಿನಾಶಕ ಸಿಂಪಡಿಸಿದ್ದರಿಂದ ಹಸುವಿನ ಮಾಂಸ ತಿಂದಿದ್ದ ಹುಲಿಗಳು ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢವಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಹಸುವಿನ ಮೃತದೇಹಕ್ಕೆ ಸಿಂಪಡಿಸಿದ್ದ ಕ್ರಿಮಿನಾಶಕದಿಂದಲೇ ಹುಲಿಗಳು ಮೃತಪಟ್ಟಿರುವುದು ಬಯಲಾಗಿದೆ.
ಮೃತಪಟ್ಟಿರುವ ಹಸುವಿನ ಮಾಲೀಕ ಇನ್ನೂ ಯಾರು ಎಂಬುದು ಪತ್ತೆಯಾಗಿಲ್ಲ. ಪೊಲೀಸರು ಇದರ ಬೆನ್ನು ಬಿದ್ದಿದ್ದು, ಸಿಡಿಆರ್ ಮತ್ತು ಟವರ್ ಲೊಕೇಷನ್ ಆಧಾರದಲ್ಲಿ ವಿಷ ಹಾಕಿದವರ ಪತ್ತೆ ಮತ್ತು ಮಾಲೀಕನ ಪತ್ತೆಗೆ ಬಲೆ ಬೀಸಿದ್ದಾರೆ.