ಲಂಚ ಕೇಳಿದ ಅಧಿಕಾರಿಯ ಟೇಬಲ್ ಮೇಲೆ ಚಿಲ್ಲರೆ ಸುರಿದು,ಹಾರ, ಮೈಸೂರು ಪೇಟೆ ತೊಡಿಸಿ ಸನ್ಮಾನ!

Views: 123
ಕನ್ನಡ ಕರಾವಳಿ ಸುದ್ದಿ: ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಉಪ ನೋಂದಣಾಧಿಕಾರಿ ಟೇಬಲ್ ಮುಂದೆ ಚಿಲ್ಲರೆ ಸುರಿದು, ಸನ್ಮಾನಿಸುವ ಮೂಲಕ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಆಕ್ರೋಶ ಹೊರಹಾಕಿದ ಘಟನೆ ಚಿಕ್ಕನಾಯಕನಹಳ್ಳಿ ಪಟ್ಟಣದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನಡೆದಿದೆ.
ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ಎತ್ತಿನ ಗಾಡಿಯಲ್ಲಿ ಅಧಿಕಾರಿಯ ಭಾವಚಿತ್ರ ಇರಿಸಿ ಮೆರವಣಿಗೆ ಮಾಡಿದ್ದಾರೆ. ಬಳಿಕ ಕಚೇರಿಗೆ ತೆರಳಿ, ಅಧಿಕಾರಿ ಟೇಬಲ್ ಮೇಲೆ ಚಿಲ್ಲರೆ ಸುರಿದು ಸನ್ಮಾನಿಸಿ ಆಕ್ರೋಶ ಹೊರಹಾಕಿದ್ದಾರೆ.
ಉಪ ನೋಂದಣಾಧಿಕಾರಿ ರಾಘವೇಂದ್ರ ಒಡೆಯರ್ ವಿರುದ್ಧ ಲಂಚಕ್ಕೆ ಬೇಡಿಕೆ ಆರೋಪ ಕೇಳಿಬಂದಿತ್ತು. ಹೀಗಾಗಿ ಲಂಚಕ್ಕೆ ಬೇಡಿಕೆ ಇರಿಸಿರೋ ಅಧಿಕಾರಿಗೆ ಸನ್ಮಾನಿಸಿ ಪ್ರತಿಭಟನೆ ನಡೆಸಲಾಯಿತು. ಜನರಿಂದ ಭಿಕ್ಷೆ ಬೇಡಿ ಸಂಗ್ರಹಿಸಿದ್ದ ಚಿಲ್ಲರೆ ಹಣವನ್ನು ಉಪನೋಂದಣಾಧಿಕಾರಿ ರಾಘವೇಂದ್ರ ಒಡಯರ್ ಟೇಬಲ್ ಮೇಲೆ ಸುರಿದು, ಅವರಿಗೆ ಹಾರ, ಮೈಸೂರು ಪೇಟೆ ತೊಡಿಸಿ ಸನ್ಮಾನಿಸಲು ಯತ್ನಿಸಲಾಗಿದೆ.
ಈ ವೇಳೆ ತಪ್ಪಿಸಿಕೊಂಡು ಹೊರ ಹೋಗಲು ಅಧಿಕಾರಿ ಯತ್ನಿಸಿದ್ದಾರೆ. ಆಗ ಅವರ ಕುರ್ಚಿಗೆ ಹಾರ ಹಾಕಿ, ಪೇಟ ತೊಡಿಸಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತರ ಪ್ರತಿಭಟನೆಯಿಂದ ಅಧಿಕಾರಿ ತೀವ್ರ ಮುಜುಗರಕ್ಕೊಳಗಾಗಿದ್ದಾರೆ.