ಭಟ್ಕಳ ಘೋರ ದುರಂತದಲ್ಲಿ ಮೃತರ ಸಂಖ್ಯೆ 11ಕ್ಕೆ ಏರಿಕೆ: ಆಸ್ಪತ್ರೆಯ ಬಳಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Views: 66
ಕನ್ನಡ ಕರಾವಳಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತಟ್ಟೆಹಕ್ಕಲು ಕಡಲತೀರದಲ್ಲಿ ಸಂಭವಿಸಿದ ಭೀಕರ ಚಿಪ್ಪಿಕಲ್ಲು ದುರಂತದ ಕೊನೆಯ ನಾಪತ್ತೆಯಾದ ವ್ಯಕ್ತಿಯ ಶವ ಇಂದು ಪತ್ತೆಯಾಗಿದೆ. ಇದರೊಂದಿಗೆ ಘೋರ ದುರಂತದಲ್ಲಿ ಮೃತರ ಒಟ್ಟು ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ನಾಪತ್ತೆಯಾಗಿದ್ದ ಮಾದೇವ ಜಟ್ಟಪ್ಪ ನಾಯ್ಕ ಎಂಬುವವರ ಮೃತದೇಹಕ್ಕಾಗಿ ಎನ್‌ಡಿಆರ್‌ಎಫ್ (NDRF) ಸಿಬ್ಬಂದಿ ಸತತ ಶೋಧ ಕಾರ್ಯ ನಡೆಸುತ್ತಿದ್ದರು. ಇಂದು ಬೆಳಿಗ್ಗೆಯಿಂದಲೇ ತೀವ್ರ ಕಾರ್ಯಾಚರಣೆ ನಡೆಸಿದ ಎನ್‌ಡಿಆರ್‌ಎಫ್ ತಂಡ, ಅಂತಿಮವಾಗಿ ಮಾದೇವ ಅವರ ಮೃತದೇಹ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಮೊದಲು ನಡೆಸಿದ ಕಾರ್ಯಾಚರಣೆಯಲ್ಲಿ 10 ಮೃತದೇಹಗಳನ್ನು ಹೊರತೆಗೆಯಲಾಗಿತ್ತು.
ಏನಿತ್ತು ಘಟನೆ?
ಭಟ್ಕಳ ತಾಲೂಕಿನ ತಟ್ಟೆಹಕ್ಕಲು ಕಡಲತೀರದ ಬಳಿ ನದಿ ಮತ್ತು ಸಮುದ್ರ ಸೇರುವ ಜಾಗದಲ್ಲಿ ಚಿಪ್ಪಿಕಲ್ಲು ತೆಗೆಯಲು ಒಟ್ಟು 13 ಜನ ನೀರಿಗಿಳಿದಿದ್ದರು. ಈ ವೇಳೆ ನೀರಿನ ಹರಿವು ಅಥವಾ ಅಲೆಗಳು ಒಮ್ಮಿಂದೊಮ್ಮೆಗೆ ಏರಿಕೆಯಾದ ಕಾರಣ 11 ಜನರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಇಬ್ಬರು ಮಾತ್ರ ಅಪಾಯದಿಂದ ಪಾರಾಗಿದ್ದರು.
ಪತ್ತೆಯಾದ ಮಾದೇವ ಜಟ್ಟಪ್ಪ ನಾಯ್ಕ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಭಟ್ಕಳ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಯ ಬಳಿ ಜಮಾಯಿಸಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಒಂದು ಸಣ್ಣ ಅಚಾತುರ್ಯ ಮತ್ತು ಪ್ರಕೃತಿಯ ವಿಕೋಪಕ್ಕೆ 11 ಅಮಾಯಕ ಜೀವಗಳು ಬಲಿಯಾಗಿರುವುದು ಇಡೀ ಜಿಲ್ಲೆಯನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.






