ರಾಜಕೀಯ

ರಾಮಮಂದಿರ ಉದ್ಘಾಟನೆಗೆ ಹೋಗುವ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಾಗ..!?

Views: 71

ಬೆಂಗಳೂರು: ರಾಮಮಂದಿರ ಉದ್ಘಾಟನೆಗೆ ಹೋಗುವ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಾಗವಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಹೋಗುವುದಿಲ್ಲ ಎಂದು ಹೇಳಿದರೆ, ಇನ್ನು ಕೆಲವೆಡೆ ಬಹಿರಂಗ ಹೇಳಿಕೆ ನೀಡಿದ್ದಾರೆ.  ಉತ್ತರ ಭಾರತದ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ‌. ಇದರಲ್ಲಿ ಕಾಂಗ್ರೆಸ್ ಇಬ್ಬಾಗವಾಗಿದೆ ಎಂದು  ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ಅಯೋಧ್ಯೆಗೆ ಹೋಗುವುದಿಲ್ಲ ಎಂದು ಹೇಳಿದ್ದರು. ಅವರಿಗೆ ಸಲಹೆಗಾರರು ಬಹಳ‌ಜನ ಇದ್ದಾರೆ. ಹೀಗಾಗಿ ರಾಮ ಮಂದಿರ ವಿಚಾರದಲ್ಲಿ ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಒಂದು ದಿನ ನಮ್ಮ ಊರಿನಲ್ಲೇ ರಾಮನ ಪೂಜಿಸುತ್ತೇವೆ ಅಂತಾರೆ ಮತ್ತೊಂದು ರಾಮ ಮಂದಿರ ಉದ್ಘಾಟನೆಗೆ ಹೊಗುವುದಿಲ್ಲ ಎನ್ನುತ್ತಾರೆ. ಅದರಿಂದ ರಾಜಕೀಯವಾಗಿ ಕಷ್ಟವಾಗಲಿದೆ ಎಂದು ಇನ್ನೊಬ್ಬ ಸಲಹೆಗಾರರು ಹೇಳಿದಾಗ ಅಯೋದ್ಯೆಗೆ ಹೋಗುವುದಾಗಿ ಹೇಳುತ್ತಾರೆ. ರಾಮಮಂದಿರ ಉದ್ಘಾಟನೆವರೆಗೂ ಇನ್ನೂ ಏನೇನು ಹೇಳುತ್ತಾರೊ ನೋಡಿ ಎಂದು ವ್ಯಂಗ್ಯವಾಡಿದರು.

ರಾಮಂದಿರ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಾಗವಾಗಿದೆ. ಉತ್ತರ ಭಾರತದ ಅನೇಕ ಶಾಸಕರು ಅಯೋಧ್ಯೆಗೆ ಹೊಗುವುದಾಗಿ ಹೇಳುತ್ತಾರೆ. ಸೋನಿಯಾ ಖರ್ಗೆ ಹೋಗುವುದಿಲ್ಲ ಎಂದು ಹೇಳುತ್ತಾರೆ‌. ರಾಜ್ಯದ ನಾಯಕರು ಜನವರಿ 22ರ ನಂತರ ಹೋಗುವುದಾಗಿ ಹೇಳುತ್ತಾರೆ. ನೆಂಟರ ಮೇಲೆ ಆಸೆ ಅಕ್ಕಿ ಮೇಲೆ ಪ್ರೀತಿ ಎನ್ನುವಂತಾಗಿದೆ ಅವರ ಕಥೆ‌. ಅಲ್ಪ ಸಂಖ್ಯಾತರ ಮತ ಕಳೆದುಕೊಳ್ಳಲು ಇಷ್ಟವಿಲ್ಲ, ಅದರಿಂದ ಹಿಂದುಗಳ ಮತ ಕಳೆದುಕೊಳ್ಳುತ್ತೇವೆ ಎಂದು ಭಯ ಆಗಿದೆ ಹೀಗಾಗಿ ಈಗ ರಾಮಮಂದಿರ ನೊಡಲು ಹೋಗುವುದಾಗಿ ಹೇಳುತ್ತಿದ್ದಾರೆ ಎಂದು ಹೇಳಿದರು.

“ನಾನು ಹಿಂದೂ ವಿರೋಧಿಯೂ ಅಲ್ಲ, ರಾಮನ ವಿರೋಧಿಯೂ ಅಲ್ಲ. ಬಿಜೆಪಿ ನಾಟಕ ಮಂಡಳಿಯ ಪ್ರದರ್ಶನ ಮುಗಿದ ಬಳಿಕ ಅಯೋಧ್ಯೆಗೆ ಭೇಟಿ ನೀಡುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂಬ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವನ್ನು ಸಿಎಂ ಸಿದ್ದರಾಮಯ್ಯ ಬೆಂಬಲಿಸಿದ್ದರು. ಈ ಕಾರಣಕ್ಕೆ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಬಿಜೆಪಿಗರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದರು.

Related Articles

Back to top button