ಜನಮನ

ರಾಜ್ಯಾದ್ಯಂತ ಸ್ಥಿರಾಸ್ತಿ ನೋಂದಣಿ ಪರಿಷ್ಕೃತ ದರ ನಾಳೆಯಿಂದ ಜಾರಿ

Views: 0

ಬೆಂಗಳೂರು, ಸೆ.30. :ರಾಜ್ಯಾದ್ಯಂತ ಸ್ಥಿರಾಸ್ತಿಗಳ ಪರಿಷ್ಕೃತ ನೂತನ “ಮಾರ್ಗಸೂಚಿ ದರ” ನಾಳೆಯಿಂದ ಜಾರಿಗೆ ಬರಲಿದ್ದು, ಸರಾಸರಿ ಶೇ.30 ರವರೆಗೆ ಆಸ್ತಿಗಳ ಮೌಲ್ಯ ಹೆಚ್ಚಳವಾಗಲಿದೆ.ಹೊಸದಾಗಿ ಸಿದ್ಧಪಡಿಸಿರುವ ಮಾನದಂಡಗಳ ಆಧಾರದಲ್ಲಿ ಶೇ 5ರಿಂದ ಶೇ. 70 ರವರೆಗೂ ಸ್ಥಿರಾಸ್ತಿಗಳ ಮೌಲ್ಯದಲ್ಲಿ ಹೆಚ್ಚಳವಾಗುತ್ತಿದ್ದು, ನಾಳೆ ಬೆಳಿಗ್ಗೆ 5 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.

ಇನ್ನೂ, ಈಗಾಗಲೇ ಹಳೆಯ ದರಗಳಲ್ಲಿ ನಡೆಯುತ್ತಿದ್ದ ನೋಂದಣಿ ಪ್ರಕ್ರಿಯೆ ಇಂದು ಕೊನೆಗೊಂಡಿದೆ.17 ಗಂಟೆಗಳ ಈ ಅವಧಿಯಲ್ಲಿ ನೋಂದಣಿಯ ಯಾವುದೇ ಹೊಸ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿಲ್ಲ ಎಂದು ನೋಂದಣಿ ಮಹಾಪರಿವೀಕ್ಷಕಿ ಮತ್ತು ಮುದ್ರಾಂಕಗಳ ಆಯುಕ್ತರಾದ ಬಿ.ಆರ್.ಮಮತಾ ಹೇಳಿದ್ದಾರೆ.

ಈಗಾಗಲೇ ಉಪ ನೋಂದಣಾಧಿಕಾರಿ ಪರಿಶೀಲನೆ ಮಾಡಿದ ಎಲ್ಲ ಅರ್ಜಿಗಳ ಪಾವತಿಯನ್ನು ಗ್ರಾಹಕರು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಅರ್ಜಿಯನ್ನು ಮರು ಮೌಲ್ಯಮಾಪನಕ್ಕಾಗಿ ಉಪ ನೋಂದಣಾಧಿಕಾರಿಗೆ ಹಿಂದಿರುಗಿಸಲಾಗುತ್ತದೆ. ಹಳೇ ದರ ಪಾವತಿಸಿದವರು, ಹೊಸ ದರದ ವ್ಯತ್ಯಾಸದ ಮೊತ್ತವನ್ನು ಮತ್ತೊಮ್ಮೆ ತುಂಬಬೇಕು. ಸೆ.30ರ ನಂತರ ನೋಂದಾಯಿಸುವ ಯಾವುದೇ ದಾಸ್ತಾವೇಜುಗಳಿಗೆ ಹೊಸ ಮಾರ್ಗಸೂಚಿ ದರ ಅನ್ವಯವಾಗುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಇತ್ತೀಚಿಗೆ ಪರಿಷ್ಕರಣೆ ದರ ಕುರಿತು ಪ್ರತಿಕ್ರಿಯಿಸಿದ್ದ ಕೃಷ್ಣಭೈರೇಗೌಡ, ನೋಂದಣಿ ಇಲಾಖೆ ಕಾನೂನಿನ ಪ್ರಕಾರ ಪ್ರತಿ ವರ್ಷ ಮಾರ್ಗಸೂಚಿ ದರ ಪರಿಷ್ಕರಣೆಯಾಗಬೇಕು. ಆದರೆ, ಕಳೆದ ಐದು ವರ್ಷದಿಂದ ಮಾರ್ಗಸೂಚಿ ದರ ಪರಿಷ್ಕರಣೆಯಾಗಿಲ್ಲ. ಇದರಿಂದ ಹಲವು ಕಡೆಗಳಲ್ಲಿ ಭೂಮಿ ಮಾರಾಟಗಾರರು ಮತ್ತು ರೈತರಿಗೆ ಅನ್ವಯವಾಗಿದ್ದರೆ, ಕಪ್ಪು ಹಣ ವಹಿವಾಟಿಗೂ ಕಾರಣವಾಗಿದೆ.ಮಾರ್ಗಸೂಚಿ ದರ ಪರಿಷ್ಕರಣೆಯಾಗದಿರುವುದು ಪರೋಕ್ಷವಾಗಿ ಕಪ್ಪು ಹಣ ವಹಿವಾಟಿಗೂ ಕಡಿವಾಣ ಹಾಕಿದಂತಾಗುತ್ತದೆ. ಹೀಗಾಗಿ ಅಕ್ಟೋಬರ್ 01 ರಿಂದ ನೂತನ ಮಾರ್ಗಸೂಚಿ ದರ ಜಾರಿಯಾಗಲಿದೆ.

ಮಾರುಕಟ್ಟೆ ದರಕ್ಕೂ ಮಾರ್ಗಸೂಚಿ ದರಕ್ಕೂ ಸಾಮ್ಯತೆ ಇರುವ ಪ್ರದೇಶಗಳಲ್ಲಿ ಮಾರ್ಗಸೂಚಿ ದರವನ್ನು ಶೇ.10 ರಷ್ಟು ಏರಿಕೆ ಮಾಡಲಾಗಿದೆ ಎಂದು ಹೇಳಿದರು.

ದರ ಎಷ್ಟು ಹೆಚ್ಚಳ ? ಮಾರುಕಟ್ಟೆ ದರಕ್ಕೂ ಮಾರ್ಗಸೂಚಿ ದರಕ್ಕೂ ಸಾಮ್ಯತೆ ಇರುವ ಪ್ರದೇಶಗಳಲ್ಲಿ ಮಾರ್ಗಸೂಚಿ ದರವನ್ನು ಶೇ. 10ರಷ್ಟು ಮಾತ್ರ ಏರಿಕೆ ಮಾಡಲಾಗಿದ್ದರೆ, ಮಾರ್ಗಸೂಚಿ ದರಕ್ಕಿಂತ ಮಾರುಕಟ್ಟೆ ದರ200 ಪಟ್ಟು ಹೆಚ್ಚಿರುವ ಪ್ರದೇಶಗಳಲ್ಲಿ ದರವನ್ನು ಶೇ. 20ರಿಂದ ಶೇ. 25 ಹೆಚ್ಚಿಸಲಾಗಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಮಾರುಕಟ್ಟೆ ದರ ಮಾರ್ಗಸೂಚಿ ದರಕ್ಕಿಂತ 500ರಿಂದ 2000 ಪಟ್ಟು ಹೆಚ್ಚಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಭೂಮಿಗಳಿಗೆ ಮಾರ್ಗಸೂಚಿ ದರ 5 ರಿಂದ 10 ಲಕ್ಷ ರೂ. ನಿಗದಿಯಾಗಿದ್ದರೆ, ಮಾರುಕಟ್ಟೆ ದರ 10 ಕೋಟಿ ರೂ.ಗಳಿಗೂ ಅಧಿಕವಿದೆ. ಇಂತಹ ಪ್ರದೇಶಗಳಲ್ಲಿ ಮಾರ್ಗಸೂಚಿ ದರವನ್ನು ಶೇ. 50 ಹೆಚ್ಚಿಸಲಾಗಿದೆ ಆಯುಕ್ತರು ತಿಳಿಸಿದ್ದಾರೆ.

Related Articles

Back to top button