ಇತರೆ
ಮುಂಜಾನೆ ವಾಕಿಂಗ್ ತೆರಳಿದ್ದ ವ್ಯಕ್ತಿಯನ್ನು ನಡು ರಸ್ತೆಯಲ್ಲಿಯೇ ಬರ್ಬರ ಹತ್ಯೆ

Views: 119
ಕನ್ನಡ ಕರಾವಳಿ ಸುದ್ದಿ: ವಾಕಿಂಗ್ ತೆರಳಿದ್ದ ವ್ಯಕ್ತಿಯೋರ್ವರನ್ನು ಕೊಲೆ ಮಾಡಿರುವ ಘಟನೆ, ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಹೊಸಕೊಪ್ಪ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜ್ ರಸ್ತೆಯಲ್ಲಿ ಮೇ 9 ರ ಮುಂಜಾನೆ ನಡೆದಿದೆ.
ಹೊಸಕೊಪ್ಪದ ನಿವಾಸಿ ಹೇಮಣ್ಣ (58) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ವ್ಯವಹಾರ ನಡೆಸುತ್ತಿದ್ದರು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಚಿರಪರಿಚಿತ ವ್ಯಕ್ತಿಯಾಗಿದ್ದರು ಎಂದು ತಿಳಿದುಬಂದಿದೆ. ಕಳೆದ ಎರಡು ವರ್ಷಗಳ ಹಿಂದೆ ಹೇಮಣ್ಣ ಅವರ ಮೇಲೆ ದಾಳಿಯಾಗಿತ್ತು. ಈ ವೇಳೆ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು ಎಂದು ಹೇಳಲಾಗಿದೆ. ಎಂದಿನಂತೆ ಅವರು ಮನೆಯಿಂದ ಮುಂಜಾನೆ ವಾಕಿಂಗ್ ತೆರಳಿದ್ದರು. ಈ ವೇಳೆ ದುಷ್ಕರ್ಮಿಗಳು ನಡು ರಸ್ತೆಯಲ್ಲಿಯೇ ಹೇಮಣ್ಣ ಅವರಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಹೊಳೆಹೊನ್ನೂರು ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.