ಮಿಸ್ ವರ್ಲ್ಡ್ 2024 ಭಾರತವನ್ನು ಪ್ರತಿನಿಧಿಸಲು ಉಡುಪಿಯ ಇನ್ನಂಜೆ ಮೂಲದ ಸಿನಿ ಶೆಟ್ಟಿ ಆಯ್ಕೆ

Views: 141
ಉಡುಪಿ, ಮುಂಬರುವ 71ನೇ ಆವೃತ್ತಿಯ ಮಿಸ್ ವರ್ಲ್ಡ್ 2024 ರಲ್ಲಿ ಭಾರತವನ್ನು ಪ್ರತಿನಿಧಿಸಲು ಉಡುಪಿ ಮೂಲದ 21 ವರ್ಷದ ಸಿನಿ ಶೆಟ್ಟಿ ಆಯ್ಕೆಯಾಗಿದ್ದಾರೆ.
ಮುಂಬೈನಲ್ಲಿ ನಡೆದ ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್-2022’ ಕಾರ್ಯಕ್ರಮದಲ್ಲಿ ಸಿನಿ ಶೆಟ್ಟಿ ‘ಮಿಸ್ ಇಂಡಿಯಾ’ ಕಿರೀಟವನ್ನು ಅಲಂಕರಿಸಿದ ನಂತರ ಈ ಘೋಷಣೆ ಹೊರ ಬಿದ್ದಿದೆ. ಅಕೌಂಟಿಂಗ್ ಮತ್ತು ಫೈನಾನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶೆಟ್ಟಿ, ಭರತನಾಟ್ಯದಲ್ಲೂ ಪ್ರವೀಣರು.
ಮೂರು ದಶಕಗಳ ವಿರಾಮದ ನಂತರ ಭಾರತಕ್ಕೆ ಮರಳಿದ ವಿಶ್ವ ಸುಂದರಿ ಚಾಂಪಿಯನ್‌ಶಿಪ್ ಮಾರ್ಚ್ 9 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. 28 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಈವೆಂಟ್ ಅನ್ನು ಆಯೋಜಿಸಿದ್ದು ಇದು ಮಹತ್ವದ ಮೈಲಿಗಲ್ಲು ಆಗಿತ್ತು.
71ನೇ ವಿಶ್ವ ಸುಂದರಿ ಸ್ಪರ್ಧೆಗೆ ಖ್ಯಾತ ಫ್ಯಾಷನ್ ಡಿಸೈನರ್ ಅರ್ಚನಾ ಕೊಚ್ಚರ್ ಅಧಿಕೃತ ಫ್ಯಾಷನ್ ಡಿಸೈನರ್ ಆಗಿ ನೇಮಕಗೊಂಡಿದ್ದಾರೆ.
ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತದ ಶ್ರೀಮಂತ ಇತಿಹಾಸವನ್ನು ಎತ್ತಿ ತೋರಿಸುತ್ತಾ, ಈ ಪ್ರತಿಷ್ಠಿತ ಕಾರ್ಯಕ್ರಮದ ಭಾಗವಾಗಿರುವುದಕ್ಕೆ ಸಿನಿ ಶೆಟ್ಟಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಐಶ್ವರ್ಯ ರೈ (1994), ರೀಟಾ ಫರಿಯಾ (1966), ಡಯಾನಾ ಹೇಡನ್ (1977), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ (2000), ಮತ್ತು ಮಾನುಷಿ ಚಿಲ್ಲರ್ (2017) ಸೇರಿದಂತೆ ಆರು ಮಂದಿ ವಿಶ್ವ ಸುಂದರಿಯರು ಭಾರತವನ್ನು ಪ್ರತಿನಿಧಿಸಿ ಕಿರೀಟವನ್ನು ಮುಡಿಗೇರಿಸಿ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಉಡುಪಿಯ ಇನ್ನಂಜೆ ಮೂಲದ ಸಿನಿ ಶೆಟ್ಟಿ ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್-2022’ ಫಿನಾಲೆ ವಿಜೇತರಾಗಿದ್ದಾರೆ. ಜೊತೆಗೆ ರಾಜಸ್ಥಾನದ ರುಬಲ್ ಶೆಖಾವತ್ ಮತ್ತು ಉತ್ತರ ಪ್ರದೇಶದ ಶಿನತಾ ಚೌಹಾಣ್ ಕ್ರಮವಾಗಿ ಫಸ್ಟ್ ರನ್ನರ್‌ಅಪ್ ಮತ್ತು ಸೆಕೆಂಡ್ ರನ್ನರ್‌ಅಪ್ ಟೈಟಲ್ ವಿಜೇತರಾಗಿದ್ದಾರೆ. ಸಿನಿ ಶೆಟ್ಟಿ ಅವರ ಮೂಲ ಉಡುಪಿಯಾದರೂ ಹುಟ್ಟಿ, ಬೆಳೆದದ್ದು ಮುಂಬೈನಲ್ಲಿ. ಹೋಟೆಲ್ ಉದ್ಯಮಿ ಸದಾನಂದ್ ಶೆಟ್ಟಿ ಮತ್ತು ಹೇಮಾ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಸಿನಿ ಶೆಟ್ಟಿ ಅಕೌಂಟಿಂಗ್ ಮತ್ತು ಫೈನಾನ್ಸ್ ವಿಷಯದಲ್ಲಿ ಪದವಿ ಪಡೆದಿದ್ದು, ಈಗ ಸಿಎಫ್‌ಎ ಕೋರ್ಸ್ ಮಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆಯಷ್ಟೇ ರೂಪದರ್ಶಿಯಾಗಿ ವೃತ್ತಿ ಬದುಕು ಆರಂಭಿಸಿರುವ ಅವರು, ಈಗಾಗಲೇ ಪ್ರತಿಷ್ಠಿತ ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ಮಿಂಚಿದ್ದಾರೆ.