ಮಲ್ಪೆ ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ವಿದೇಶಿ ಬೋಟ್ ಹಾಗೂ ಮೀನುಗಾರರು ವಶಕ್ಕೆ

Views: 177
ಕನ್ನಡ ಕರಾವಳಿ ಸುದ್ದಿ: ಮಲ್ಪೆ ಆಳ ಸಮುದ್ರದಲ್ಲಿ ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ಒಂದು ವಿದೇಶಿ ಬೋಟ್ ಪತ್ತೆಯಾಗಿದೆ. ಮೀನುಗಾರರು ಈ ಕುರಿತು ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ಈ ಬೋಟ್ ಅನ್ನು ಸೀಜ್ ಮಾಡಿ ಅದರಲ್ಲಿದ್ದವರನ್ನು ಬಂಧಿಸಿದ್ದಾರೆ.
ಉಡುಪಿಯ ಮಲ್ಪೆ ಕರಾವಳಿಯ ಸೈಂಟ್ ಮೇರಿಸ್ ದ್ವೀಪದಲ್ಲಿ ಓಮಾನ್ ಮೂಲದ ಈ ಮೀನುಗಾರಿಕಾ ಬೋಟ್ ಪತ್ತೆಯಾಗಿದೆ. ಓಮಾನ್ ಬಂದರಿನಿಂದ ತಪ್ಪಿಸಿಕೊಂಡು ಭಾರತೀಯ ಸಮುದ್ರಕ್ಕೆ ಬಂದಿರುವ ಈ ಬೋಟ್‌ನಲ್ಲಿ ತಮಿಳುನಾಡು ಮೂಲದ ಮೀನುಗಾರರು ಇರುವುದು ಪತ್ತೆಯಾಗಿದೆ. ಓಮಾನ್ ಮೂಲದ ಬೋಟ್‌ನಲ್ಲಿ ಮೀನುಗಾರಿಕ ವೃತ್ತಿ ನಡೆಸುತ್ತಿದ್ದ ತಮಿಳುನಾಡು ಮೂಲದ ತಂಡಕ್ಕೆ ವೇತನ ಹಾಗೂ ಆಹಾರ ನೀಡದೆ ಬೋಟ್ ಮಾಲೀಕ ಸತಾಯಿಸುತ್ತಿದ್ದ ಎಂದು ಗೊತ್ತಾಗಿದೆ.
ಬೋಟ್ ಮಾಲೀಕ ಅದರಲ್ಲಿದ್ದ ಕೆಲಸಗಾರರ ಪಾಸ್‌ಪೋರ್ಟ್ ವಶಕ್ಕೆ ಪಡೆದುಕೊಂಡು ಸಿಬ್ಬಂದಿಗೆ ಚಿತ್ರಹಿಂಸೆ ನೀಡುತ್ತಿದ್ದ. ಹೀಗಾಗಿ ಆತನಿಂದ ತಪ್ಪಿಸಿಕೊಂಡ ಮೀನುಗಾರರು ಪ್ರಾಣ ಭಯದಿಂದ ಒಮಾನ್ ಬಂದರಿನಿಂದ ರಕ್ಷಣಾ ಪಡೆಯವರ ಕಣ್ಣು ತಪ್ಪಿಸಿ ಇಲ್ಲಿಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಮೀನುಗಾರರು ಸಮುದ್ರ ಮಾರ್ಗದಲ್ಲಿ 4 ಸಾವಿರ ಕಿಲೋಮೀಟರ್ ಕ್ರಮಿಸಿ ಭಾರತದ ಸಮುದ್ರ ತೀರಕ್ಕೆ ಬಂದಿದ್ದಾರೆ.
ಕಾರವಾರ ದಾಟಿ ಮಲ್ಪೆಯತ್ತ ಪ್ರಯಾಣಿಸುತ್ತಿದ್ದಾಗ ಡೀಸೆಲ್ ಖಾಲಿಯಾಗಿ ಹಣ ಹಾಗೂ ಆಹಾರವಿಲ್ಲದೆ ಮೀನುಗಾರರು ಪರದಾಟ ಅನುಭವಿಸಿದ್ದಾರೆ. ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಸ್ಥಳೀಯ ಮೀನುಗಾರರಿಗೆ ಈ ವಿದೇಶಿ ಬೋಟ್ ಕಂಡುಬಂದಿದೆ. ಮೀನುಗಾರರು ನೀಡಿದ ಮಾಹಿತಿಯಿಂದ ಬೋಟ್ ಹಾಗು ಮೀನುಗಾರರನ್ನು ಕೋಸ್ಟ್ ಗಾರ್ಡ್ ವಶಕ್ಕೆ ಪಡೆದಿದ್ದಾರೆ.